add

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ 150 ಕ್ಕೂ ಹೆಚ್ಚು ಮನೆಗಳಿಗೆ ಹಾನಿ! ಇಂದು 125 ಕರೋನಾ ಪಾಸಿಟಿವ್!

1392

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 125 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 78 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 30, ಅಂಕೋಲಾದಲ್ಲಿ 10, ಕುಮಟಾದಲ್ಲಿ 17, ಹೊನ್ನಾವರ, ಯಲ್ಲಾಪುರದಲ್ಲಿ ತಕಾಮೂವರು, ಭಟ್ಕಳದಲ್ಲಿ 10, ಶಿರಸಿ, ಸಿದ್ದಾಪುರ, ಜೊಯಿಡಾದಲ್ಲಿ ತಲಾ‌ ಓರ್ವರಲ್ಲಿ, ಮುಂಡಗೋಡದಲ್ಲಿ 16, ಹಳಿಯಾಳದಲ್ಲಿ 33 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇನ್ನು, ಕಾರವಾರದಲ್ಲಿ ಐವರು, ಅಂಕೋಲಾದಲ್ಲಿ 12, ಕುಮಟಾದಲ್ಲಿ ಮೂವರು, ಶಿರಸಿಯಲ್ಲಿ 9, ಮುಂಡಗೋಡದಲ್ಲಿ 25, ಹಳಿಯಾಳದಲ್ಲಿ 24 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯ 2,409 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,632 ಮಂದಿ ಗುಣಮುಖರಾಗಿದ್ದಾರೆ. 26 ಮಂದಿ ಸಾವನ್ನಪ್ಪಿದ್ದು, 684 ಸಕ್ರಿಯ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದರೆ, 68 ಸೋಂಕಿತರು ಹೋಮ್ ಐಸೋಲೆಶನ್ ನಲ್ಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ- 150 ಕ್ಕೂ ಹೆಚ್ಚು ಮನೆಗಳು ಜಲಾವೃತ- ಕದ್ರಾದಲ್ಲಿ ಜಲಾಶಯದಿಂದ ನೀರು ಬಿಡುಗಡೆ

ಉತ್ತರಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ.ಕರಾವಳಿ ತಾಲೂಕುಗಳ ಅನೇಕ ಹಳ್ಳಿಗಳು ಜಲಾವೃತವಾಗಿವೆ. ಜಿಲ್ಲೆಯ ಅಂಕೋಲಾ , ಕುಮಟಾ, ಹೊನ್ನಾವರ ಯಲ್ಲಾಪುರ ತಾಲೂಕಿನ ತಗ್ಗು ಪ್ರದೇಶಗಳಿಗೆ ಗಂಗಾವಳಿ, ಅಘನಾಶಿನಿ, ಬೇಡ್ತಿ ನದಿ ನೀರು ನುಗ್ಗಿದೆ.ಗಂಗಾವಳಿ ನದಿ ಪ್ರವಾಹದಿಂದ ಅಂಕೋಲಾ ತಾಲೂಕಿನ ವಾಸರಕುದ್ರಗಿ ಹಳ್ಳಿ ಸಂಪೂರ್ಣ ಜಲಾವೃತವಾಗಿದ್ದು 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.ಗ್ರಾಮದ ಜನರನ್ನು
ದೋಣಿ ಮೂಲಕ ರಕ್ಷಣೆ ಮಾಡಲಾಗುತಿದ್ದು
ಹಲವು ಮನೆಗಳಲ್ಲಿ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ದಾಖಲೆಗಳು ನೀರುಪಾಲಾಗಿದ್ದು ಗ್ರಾಮದಲ್ಲಿ ಐದು ಗಂಜಿಕೇಂದ್ರ ಸ್ಥಾಪನೆ ಮಾಡಿದ್ದಾರೆ.
ಸ್ಥಳಕ್ಕೆ ಕಾರವಾರದ ಶಾಸಕಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಅಂಕೋಲ-ಯಲ್ಲಾಪುರ ರಸ್ತೆ ಬಂದ್

ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಜಿಲ್ಲೆಯ ಹುಬ್ಬಳ್ಳಿ ರಸ್ತೆ ರಾಷ್ಟ್ರೀಯ ಹೆದ್ದಾರಿ 63ರ ಸುಂಕಸಾಳ ಬಳಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಗಿದೆ. ಇನ್ನು ಇಲ್ಲಿನ ಹೆಗ್ಗಾರ್, ಡೋಂಗ್ರಿ, ರಾಮನಗುಳಿ, ಸುಂಕಸಾಳ, ಹೀಗೆ ವಿವಿಧ ಗ್ರಾಮಗಳಲ್ಲಿ ನದಿ‌ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.ಇದಲ್ಲದೇ ಮಳೆ ಅಬ್ಬರ ಹೆಚ್ಚಾದ್ದರಿಂದ ಅಂಕೋಲ- ಯಲ್ಲಾಪುರ ರಸ್ತೆಯನ್ನು ಬಂದ್ ಮಾಡಲಾಗಿದೆ.

ಕಾರವಾರದಲ್ಲಿ ಅಬ್ಬರದ ಮಳೆ- ಮೀನುಗಾರಿಕೆ ಸ್ಥಬ್ಧ

ಇನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದಲ್ಲಿ ಸುರಿಯುತ್ತಿರುವ ಮಳೆಗೆ ಜನ ಕಂಗಾಲಾಗಿದ್ದಾರೆ. ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣ ವಾಗಿದೆ. ತಗ್ಗು ಪ್ರದೇಶಗಳು ಜಲಾವೃತ್ತವಾಗಿ ಅಪಾಯ ತಂದಿರಿಸಿದೆ. ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು ಜನರನ್ನ ಆತಂಕಕ್ಕೆ ದೂಡಿದೆ.

ಜಿಲ್ಲೆಯ ಕರಾವಳಿಯಲ್ಲಿ ಸಮುದ್ರದ ಅಲೆಗಳ ರೌದ್ರ ನರ್ತನಕ್ಕೆ ಮೀನುಗಾರರ ಸ್ಥಿತಿ ಅಯೋಮಯವಾಗಿದೆ. ಸಮುದ್ರ ಆಳೆತ್ತರದ ಅಲೆಗಳು ತೀರಕ್ಕೆ ಅಪ್ಪಳಿಸಿ ಸಮುದ್ರ ದಂಡೆಯ ಜನರಲ್ಲಿ ನಡುಕ ಹುಟ್ಟಿಸಿದೆ. ಬಹುತೇಕ ಕಡೆ ಕಡಲ ಕೊರೆತ ಉಂಟಾಗಿ ಸಮುದ್ರದ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿ ಆಗಿದೆ.

ಜಿಲ್ಲೆಯ ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣ ಸ್ಥಗಿತವಾಗಿದೆ.

ಹೊಸ ಆಸೆ ಹೊಸ ಕನಸಿನೊಂದಿಗೆ ಆರಂಭವಾದ ಈವರ್ಷದ ಮೀನುಗಾರಿಕೆ ಹಂಗಾಮಿಗೆ ಆರಂಭದಲ್ಲಿಯೇ ಪ್ರಕೃತಿ ಭಾರೀ ಪ್ರಮಾಣದಲ್ಲಿ ಹೊಡೆತ ಕೊಟ್ಟಿದೆ.

ಶಿರಸಿಯಲ್ಲಿ ಧರೆಗುರಿಳಿದ ಮರ


ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದೆ. ಶಿರಸಿಯ ಬನವಾಸಿ ರಸ್ತೆ ಬಳಿ ವಿದ್ಯುತ್ತ ಕಂಬ ಹಾಗೂ ಮರಗಳು ಉರುಳಿ ಸಾಕಷ್ಟು ಹಾನಿಯಾಗಿದೆ.

ಕದ್ರಾ ಜಲಾಶಯದಿಂದ ನೀರು ಬಿಡುಗಡೆ

ಮಳೆ ಅಬ್ಬರ ಜೋರಾಗಿದ್ದು,ಇನ್ನೂ ನಾಲ್ಕು ದಿನ ಹೆಚ್ಚು ಮಳೆ ಬರುವುದಾಗಿ ಹವಾಮಾನ. ಇಲಾಖೆ ಮುನ್ನೆಚ್ಚರಿಕೆ ನೀಡಿದ್ದರಿಂದ ಮುಂಜಾಗೃತಾ ಕ್ರಮವಾಗಿ ಕದ್ರಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರನ್ನು 6 ಗೇಟ್ ಗಳ ಮೂಲಕ ಹೊರ ಬಿಡಲಾಗಿದೆ.
ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕಾಳಿ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ಮಳೆ ಜೋರಾಗಿದ್ದು, ಕದ್ರಾ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಗರಿಷ್ಠ 34.50 ಮೀಟರ್  ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ  ಈಗಾಗಲೇ 32.00 ಮೀಟರ್ ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ 6 ಗೇಟ್‌ಗಳನ್ನು ತೆರೆದು 40 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಈಗಾಗಲೇ ನದಿ ತೀರದ ಜನರಿಗೆ ಎಚ್ಚರಿಕೆ ನೀಡಿ ಸ್ಥಳಾಂತರಿಸಿರುವ ಕೆಪಿಸಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಮೈಕ್ ಮೂಲಕ ಸಂದೇಶ ರವಾನಿಸುತ್ತಿದ್ದಾರೆ. ಅಲ್ಲದೆ ಸ್ಥಳದಲ್ಲಿ ಗ್ರಾಮ ಪಂಚಾಯತ ಅಧಿಕಾರಿ, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿ, ನೋಡಲ್ ಅಧಿಕಾರಿ ಸೇರಿದಂತೆ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.

ಇಂದಿನ ಮಳೆ ಪ್ರಮಾಣ ಹಾಗೂ ಜಲಾಶಯದ ನೀರಿನ ಮಟ್ಟ :-

ದಿನಾಂಕ: 5-8-2020

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ:

ಅಂಕೋಲಾದಲ್ಲಿ 104.4 ಮಿ.ಮೀ, ಭಟ್ಕಳ 44.4 ಮಿ.ಮೀ, ಹಳಿಯಾಳ 58.4 ಮಿ.ಮೀ, ಹೊನ್ನಾವರ 86.8 ಮಿ.ಮೀ, ಕಾರವಾರ 100.0 ಮಿ.ಮಿ, ಕುಮಟಾ 77.6 ಮಿ.ಮೀ, ಮುಂಡಗೋಡ 50.6 ಮಿ.ಮೀ, ಸಿದ್ದಾಪುರ 143.2 ಮಿ.ಮೀ ಶಿರಸಿ 128.0 ಮಿ.ಮೀ, ಜೋಯಡಾ 98.2 ಮಿ.ಮೀ, ಯಲ್ಲಾಪುರ 103.0 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 32.00 ಮೀ (2020), 26873.00.00 ಕ್ಯೂಸೆಕ್ಸ್ (ಒಳಹರಿವು) 16091.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 71.00 ಮೀ. (2020), 17978.0 ಕ್ಯೂಸೆಕ್ಸ್ (ಒಳ ಹರಿವು) 7155.0 (ಹೊರಹರಿವು) ಸೂಪಾ: 564.00 ಮೀ (ಗ), 535.90 ಮೀ (2020), 38940.509 ಕ್ಯೂಸೆಕ್ಸ್ (ಒಳ ಹರಿವು), 0.000 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 454.10 ಮೀ (2020), 2431.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 435.59 ಮೀ (2020), 4851.0 ಕ್ಯೂಸೆಕ್ಸ್ (ಒಳ ಹರಿವು) 2456.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 52.78 ಮೀ (2020) 8714.87 ಕ್ಯೂಸೆಕ್ಸ್ (ಒಳ ಹರಿವು) 7935.91 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1777.60 ಅಡಿ (2020) 62003.00 ಕ್ಯೂಸೆಕ್ಸ (ಒಳ ಹರಿವು) 1695.60 ಕ್ಯೂಸೆಕ್ಸ್ (ಹೊರ ಹರಿವು)

ಹೆಣ್ಣು ಮಗುವೆಂದು ಹೆತ್ತವರೇ ಮಗುವನ್ನು ಬಾವಿಗೆ ಎಸೆದ್ರು!

ಯಲ್ಲಾಪುರ:ಕೆಲವು ದಿನದ ಹಿಂದೆ ಯಲ್ಲಾಪುರದಲ್ಲಿ 40 ದಿನದ ಶಿಶುವನ್ನು ಬಾವಿಗೆ ಎಸೆದು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಹೆತ್ತ ತಂದೆ- ತಾಯಿಯೇ ಮಗಳನ್ನು ಬಾವಿಗೆ ಎಸೆದು ಕೊಲೆ ಮಾಡಿರುವುದು ತನಿಖೆಯಿಂದ‌ ತಿಳಿದು ಬಂದಿದೆ.

ತಾಲೂಕಿನ ರಾಮನಕೊಪ್ಪದಲ್ಲಿ ಆಗಸ್ಟ್ 2ರಂದು 40 ದಿನದ ಹೆಣ್ಣು ಶಿಶು ತನುಶ್ರೀಯ ಶವ ಬಾವಿಯಲ್ಲಿ ದೊರೆತಿತ್ತು. ತೊಟ್ಟಿಲಲ್ಲಿ ಮಲಗಿದ್ದ ಮಗು ಮರು ದಿನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು.

ಈ ಸಂಬಂಧ ಮಗುವಿನ ತಂದೆ ಚಂದ್ರಶೇಖರ್ ಭಟ್, ತಾಯಿ ಪ್ರಿಯಾಂಕಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಹೆಣ್ಣು ಮಗುವೆಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ. ಮಗುವನ್ನು ಬಾವಿಗೆ ಎಸೆದು ಮಗು ನಾಪತ್ತೆಯಾಗಿದೆ ಎಂದು ಪಾಲಕರು ಪೊಲೀಸರಿಗೆ ದೂರು ನೀಡಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ