BREAKING NEWS
Search

ಕಾರವಾರ,ಜೋಯಿಡಾ ತಾಲೂಕು ಗೋವಾಕ್ಕೆ?ಕಾರವಾರದ ಮಾಜಿ ಸಚಿವರ ಬೆಂಬಲ!

947

ಕಾರವಾರ :- ಮಹಾರಾಷ್ಟ್ರ ಬೆಳಗಾವಿಯಲ್ಲಿ ಗಡಿ ವಿವಾದದ ಕಿಚ್ಚು ಹಚ್ಚಿದೆ ಇದರ ಬೆನ್ನಲ್ಲೇ ಗೋವಾ ಕೂಡ ಕಾರವಾರದಲ್ಲಿ ಗಡಿ ವಿವಾದ ಸೃಷ್ಟಿಸಿದ್ದು ಕಾರವಾರ,ಜೋಯಿಡಾ ತಾಲೂಕನ್ನು ಗೋವಾಕ್ಕೆ ಸೇರಿಸುವಂತೆ ಗೋವಾ ಕೊಂಕಣ ರಾಜ್ಯ ಏಕೀಕರಣ ಮಂಚ್ ಪ್ರಧಾನಮಂತ್ರಿಗಳಿಗೆ ಪತ್ರ ಬರೆದುದ್ದು ಈಗ ಸ್ಥಳೀಯ ಜನರ ಸಹಿ ಸಂಗ್ರಹಕ್ಕೆ ಮುಂದಾಗಿದೆ ಇದರ ಜೊತೆಗೆ ಕಾರವಾರದ ಮಾಜಿ ಸಚಿವ ಆಸ್ನೋಟಿಕರ್ ಕೂಡ ಬೆಂಬಲ ನೀಡಿದ್ದಾರೆ.

ಪ್ರಧಾನಿಗೆ ಕಳುಹಿಸಿದ ಪತ್ರ.

ಇತ್ತೀಚೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಕಾರವಾರ,ಜೋಯಿಡಾ,ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆಣಕಿದ್ದರು.

ಇದರ ಬೆನ್ನಲ್ಲೇ ಗೋವಾ ಕೊಂಕಣ ಮಂಚ್ ಕಾರವಾರ,ಜೋಯಿಡಾ ತಾಲೂಕು ಭಾಷಾವಾರು ಲೆಕ್ಕದಲ್ಲಿ ಗೋವಾಕ್ಕೆ ಸೇರಬೇಕು,ಮಹರಾಷ್ಟ್ರಕ್ಕೆ ಅಲ್ಲ ಎಂದು ಪ್ರತಿಪಾದಿಸುತಿದ್ದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದೆ.

ಇದರ ಜೊತೆಯಲ್ಲಿ ಕಾರವಾರ,ಜೋಯಿಡಾ ಭಾಗದಲ್ಲಿ ಜನರ ಸಹಿಸಂಗ್ರಹಕ್ಕೆ ಮುಂದಾಗಿದ್ದು ಕಾನೂನು ಹೋರಾಟದ ನಿರೀಕ್ಷೆಯಲ್ಲಿದೆ.

ಗೋವಾ ಕೊಂಕಣ ರಾಜ್ಯ ಏಕೀಕರಣ ಮಂಚ್ ವಾದವೇನು?

ಜೋಯಿಡಾ,ಕಾರವಾರ ತಾಲೂಕಿನಲ್ಲಿ ಅತಿಹೆಚ್ಚು ಕೊಂಕಣಿ ಮಾತನಾಡುವವರಿದ್ದು ಇವರೆಲ್ಲರೂ ಗೋವಾಕ್ಕೆ ಸೇರಬೇಕೆಂಬುದು ಇವರ ಹಕ್ಕೊತ್ತಾಯವಾಗಿದ್ದು ಈಗಾಗಲೇ ಈ ಕುರಿತು ಪ್ರಧಾನಮಂತ್ರಿ ಮೋದಿಗೆ ಪತ್ರ ಬರೆದಿದ್ದು ಕಾರವಾರ ಜೋಯಿಡಾ ತಾಲೂಕನ್ನು ಗೋವಾಕ್ಕೆ ಸೇರಿಸುವಂತೆ ಮನವಿ ಮಾಡಿದೆ.

ಇನ್ನು ಪ್ರಧಾನಮಂತ್ರಿ ಕಾರ್ಯಾಲಯದ ಉತ್ತರಕ್ಕಾಗಿ ನಿರೀಕ್ಷೆ ಮಾಡುತಿದ್ದೇವೆ,ಕೆಲವೇ ಸುಪ್ರಿಂ ಕೋರ್ಟ ನಲ್ಲಿ ಕೂಡ ದಾವೆ ಹೂಡುವುದಾಗಿ ಗೋವಾ ಕೊಂಕಣ ರಾಜ್ಯ ಏಕೀಕರಣ ಮಂಚ್ ನ ಆಶಾ ಪಾಲನ್ಕರ್ ಮಾಹಿತಿ ನೀಡಿದ್ದಾರೆ.

ಪ್ರಮುಖ ಹಕ್ಕೊತ್ತಾಯ:-


ಕಾರವಾರ ಮತ್ತು ಜೋಯಿಡಾ ತಾಲೂಕಿನಲ್ಲಿ ಅತಿಹೆಚ್ಚು ಕೊಂಕಣಿ ಮಾತನಾಡುವವರಿದ್ದಾರೆ.
ಇವರೆಲ್ಲರು ಉದ್ಯೋಗಕ್ಕಾಗಿ ಗೋವಾ ಮೊರೆ ಹೋಗಿದ್ದಾರೆ.
ಭಾಷಾವಾರು ರಾಜ್ಯ ವಿಂಗಡನೆಯಲ್ಲಿ ಕಾರವಾರ ,ಜೋಯಿಡಾಕ್ಕೆ ಅನ್ಯಾಯವಾಗಿದೆ.ಇದನ್ನು ಈಗ ಸರಿಪಡಿಸಬೇಕಿದ್ದು ಕೊಂಕಣಿ ಮಾತನಾಡುವ ಜನರಿರುವ ಎರಡೂ ತಾಲೂಕನ್ನು ಗೋವಾಕ್ಕೆ ಸೇರಿಸಬೇಕಿದೆ.

ಗೋವಾ ಕೊಂಕಣ ರಾಜ್ಯ ಏಕೀಕರಣ ಮಂಚ್ ಸದಸ್ಯರು.

ಕಾರವಾರ,ಗೋವಾ ಗಡಿಭಾಗದಲ್ಲಿ ಕೊಂಕಣಿಗರ ಭಾಷೆಯಮೇಲೆ ಕನ್ನಡಿಗರು ಕನ್ನಡ ಹೇರುವ ಮೂಲಕ ಮಾತೃ ಭಾಷೆಗೆ ಕೊಡಲಿ ಪೆಟ್ಟು ನೀಡುತಿದ್ದಾರೆ. ಕೊಂಕಣಿ ಶಾಲೆಗಳನ್ನು ಮುಚ್ಚುವ ಮೂಲಕ ಕನ್ನಡ ಹೇರಲಾಗಿದ್ದು ಇದರಿಂದಾಗಿ ಮಾತೃ ಭಾಷೆಗೆ ದೊಡ್ಡ ಹೊಡೆತ ನೀಡಿದ್ದಾರೆ.
ಮಾನಸಿಕವಾಗಿ ಗೋವಾ ಭಾಗಕ್ಕೆ ಸೇರಿರುವ ಇವರಿಗೆ ನ್ಯಾಯ ದೊರೆಯಬೇಕಿದೆ.

ಕಾರವಾರ,ಜೋಯಿಡಾ ಭಾಗವನ್ನು ಕೊಂಕಣಿಗರು ಎನ್ನುವ ಕಾರಣಕ್ಕೆ ಕರ್ನಾಟಕ ಸರ್ಕಾರ ನಿರ್ಲಕ್ಷಿಸಿದ್ದು ಅಭಿವೃದ್ಧಿಯಾಗದೇ ಹಿಂದುಳಿದಿದೆ.

ಇವೆರಡೂ ತಾಲೂಕುಗಳು ಅಭಿವೃದ್ಧಿಯಾಗಬೇಕಾದರೇ ಗೋವಾಕ್ಕೆ ಸೇರಬೇಕಿದೆ ಎಂಬ ಹಕ್ಕೊತ್ತಾಯ ಗೋವಾ ಕೊಂಕಣ್ ಮಂಚ್ ನವರದ್ದಾಗಿದೆ.

ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಬೆಂಬಲ!

ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಈ ಹಿಂದೆ ಗೋವಾ ಪರ ಹೇಳಿಕೆ ಫೋಟೋ.

ಕಾರವಾರದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಕಾರವಾರ,ಜೋಯಿಡಾ ತಾಲೂಕು ಅಭಿವೃದ್ಧಿ ದೃಷ್ಟಿಯಿಂದ ಗೋವಾಕ್ಕೆ ಸೇರಬೇಕು ಎಂಬ ವಾದ ಹೊಂದಿದ್ದಾರೆ.
ಈ ಹಿಂದೆ(2012) ಸಚಿವರಾಗಿದ್ದ ಸಂದರ್ಭದಲ್ಲಿ ಗೋವಾ ಪತ್ರಿಕೆಯೊಂದಕ್ಕೆ ಸಂದರ್ಶನ ಸಂದರ್ಭದಲ್ಲಿ ಇದನ್ನು ಪ್ರತಿಪಾದಿಸಿದ್ದು ಇಂದು ಕೂಡ ಇದರ ಪರ ಇದ್ದಾರೆ.
ಅವರ ದೃಷ್ಟಿಯಲ್ಲಿ ಕೂಡ ಕಾರವಾರ ಅಭಿವೃದ್ಧಿಯಾಗಿಲ್ಲ ಹೀಗಾಗಿ ಗೋವಾ ಸೇರಿದರೆ ಪ್ರವಾಸೋಧ್ಯಮ ,ರಸ್ತೆ ,ಉದ್ಯೋಗ ದೃಷ್ಟಿಯಿಂದ ಒಳಿತು ಎನ್ನುವುದು ಅವರ ಅಭಿಪ್ರಾಯವಾಗಿದೆ.

ಮೌನವಾಗಿದೆ ಕನ್ನಡ ಸಂಘಟನೆಗಳು!

ಈ ಹಿಂದೆ ಕಾರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಹೋರಾಟಗಾರರು ಕಾರವಾರ,ಜೋಯಿಡಾ ಗೋವಾಕ್ಕೆ ಸೇರಿಸುವ ಪ್ರಸ್ತಾಪದ ವಿರುದ್ಧ ಪ್ರತಿಭಟನೆ ನೆಡೆಸಿ ಖಂಡಿಸಿದ್ದವು. ಇದರ ನಂತರ ತಣ್ಣಗಾಗಿದ್ದ ವಿವಾದ ಈಗ ಬುಗಿಲೆದ್ದಿದೆ.ಜೊತೆಗೆ ಕೊಂಕಣ ಮಂಚ್ ಜನರ ಸಹಿ ಸಂಗ್ರಹಕ್ಕೂ ಮುಂದಾಗಿದೆ.
ಆದರೇ ಈ ಕುರಿತು ಈವರೆಗೂ ಕನ್ನಡ ಸಂಘಟನೆಗಳು ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಪತ್ರಿಕೆ ಸಹ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಪ್ರತಿಕ್ರಿಯೆಗೆ ಪ್ರಯತ್ನಿಸಿದೆ. ಆದರೇ ಹಲವು ಬಾರಿ ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸದ ಕಾರಣ ಪ್ರತಿಕ್ರಿಯೆ ಅಥವಾ ಅವರ ನಿಲುವು ತಿಳಿದಿಲ್ಲ.
ಆದರೇ ಕಾರವಾರದ ಹಲವು ನಾಗರೀಕರು ಗೋವಾಕ್ಕೆ ಸೇರಿಸುವ ಪ್ರಸ್ತಾಪದ ವಿರುದ್ಧ ಇರುವುದು ಖಚಿತವಾಗಿದೆ.

ಸುಪ್ರಿಂ ಕೋರ್ಟ ನಲ್ಲಿದೆ ವಿವಾದ?

ಮಹಾರಾಷ್ಟ್ರ ಸರ್ಕಾರ 2014 ರಲ್ಲಿ ಸುಪ್ರಿಂ ಕೋರ್ಟ ನಲ್ಲಿ ಕಾರವಾರ,ಜೋಯಿಡಾ ಭಾಗವು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ದಾವೆ ಹೂಡಿದ್ದು ನ್ಯಾಯಾಲಯದಲ್ಲಿ ವಾದ ವಿವಾದ ನಡೆಯುತ್ತಿದೆ.

ಇನ್ನು ಗೋವಾ ಕೊಂಕಣ ಮಂಚ್ ಕೂಡ ಭಾಷಾವಾರು ಮಹರಾಷ್ಟ್ರಕ್ಕೆ ಅಲ್ಲ ಗೋವಾ ರಾಜ್ಯಕ್ಕೆ ಕಾರವಾರ,ಜೋಯಿಡಾ ತಾಲೂಕು ಸೇರಬೇಕು ಎನ್ನುವ ಒತ್ತಡ ಹೇರುತಿದ್ದು ಇದಕ್ಕೆ ಗೋವಾ ರಾಜ್ಯದ ಹಲವು ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಇಷ್ಟುದಿನ ತಟಸ್ತವಾಗಿದ್ದ ಗೋವಾ ಗಡಿ ವಿವಾದ ಈಗ ಮುನ್ನಾಲೆಗೆ ಬಂದಿದ್ದು ಮುಂದಿನ ದಿನದಲ್ಲಿ ಯಾವ ಹಂತ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
Leave a Reply

Your email address will not be published. Required fields are marked *