ಅಪರೂಪದ ದರ್ಶನ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವೆ-ಸಭೆ-ಮಾಜಿ ಉಸ್ತುವಾರಿಗಳಿಂದ 21 ಅಂಶದ ಪತ್ರ ತಿಳುವಳಿಕೆ!

913

ಕಾರವಾರ :- ಅಮವಾಸೆಗೆ ಹುಣುಮೆಗೆ ಕಷ್ಟಕ್ಕೂ ಸಿಗದ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವೆ ಇಂದು ಕಾರವಾರಕ್ಕೆ ಆಗಮಿಸಿದ್ದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೋನಾ ನಿಯಂತ್ರಣ ಸಂಭಂದ ಅಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಭೆ ನಡೆಸಿದರು.

ಅಧಿಕಾರಿಗಳೊಂದೊಗೆ ಅಂತರದ ಸಭೆ.

ನಂತರ ಮಾತನಾಡಿದ ಜೊಲ್ಲೆ ಜಿಲ್ಲೆಯಲ್ಲಿ ಪರಿಸ್ಥಿತಿಯ ಬಗ್ಗೆ ಇಂದು ಸಭೆ ನಡೆಸಿ ಮಾಹಿತಿ ಪಡೆಯಲಾಗಿದೆ. ಭಟ್ಕಳದಲ್ಲಿ ಪಾಸಿಟಿವ್ ಕೇಸು ಪತ್ತೆಯಾಗಿರುವ ಹಿನ್ನಲೆಯಲ್ಲಿ ಶಾಸಕರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ ಪಡೆದು ಮುಂದಿನ ದಿನದಲ್ಲಿ ಸೋಂಕು ಹರಡದಂತೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದರು.

ಜಿಲ್ಲೆಗೆ ಹೊರದೇಶದಿಂದ ಒಂದುವರೆ ಸಾವಿರ ಜನರು ಬಂದಿದ್ದು ಎಲ್ಲರನ್ನೂ ಹೋಂ ಕ್ವಾರಂಟೇನ್ ನಲ್ಲಿ ಇಡಲಾಗಿದೆ. ಜಿಲ್ಲಾಡಳಿತ ಕೊರೋನಾ ಕಡಿವಾಣಕ್ಕೆ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಜ್ವರದಿಂದ ಬಳಲುತ್ತಿರುವವರ ಮಾಹಿತಿ ಪಡೆಯಲು ಆಶಾ ಕಾರ್ಯಕರ್ತರ, ಹಾಗೂ ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆ ಸಮೀಕ್ಷೆಗೆ ಮುಂದಾಗಲಾಗಿದೆ.

ಒಂದೊಮ್ಮೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಚಿಕಿತ್ಸೆಗೆ ಬೇರೆ ಕಡೆ ಸಮಸ್ಯೆ ಆಗದಂತೆ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲು ವಿಶೇಷವಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ.‌ ಸದ್ಯ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದರು.

ಕಲ್ಲಂಗಡಿ ಹಣ್ಣನ್ನು ಬೆಳೆಯುವ ಜಿಲ್ಲೆಯ ರೈತರು ಸದ್ಯ ಸಮಸ್ಯೆಗೆ ಸಿಲುಕಿದ್ದಾರೆ. ಅವರಿಗೆ ಸಮಸ್ಯೆ ಆಗದಂತೆ ಗೋವಾ ಸಿಎಂ ಜೊತೆ ಮಾತನಾಡಿ ಅಲ್ಲಿಗೆ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಮೀನುಗಾರರಿಗೆ ಸಮಸ್ಯೆ ಆಗದಂತೆ ಸಣ್ಣ ಬೋಟ್ ಗಳಲ್ಲಿ ಮೀನುಗಾರಿಕೆಗೆ ಅವಕಾಶ ಕೊಟ್ಟ ಮೀನನ್ನ ಇಲಾಖೆಯ ಮೂಲಕವೇ ಮಾರಾಟ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಕುಮಟಾ ದಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ಕಲೆಹಾಕುತ್ತಿರುವ ಆಶಾ ಕಾರ್ಯಕರ್ತರು.

ಸೋಂಕಿತರ ಸಂಪರ್ಕಕ್ಕೆ ಇದ್ದವರನ್ನ ಇಷ್ಟು ದಿನ ಹೋಂ ಕ್ವಾರಂಟೇನ್ ನಲ್ಲಿಡಲು ಬಿಡಲಾಗಿತ್ತು. ಇನ್ನು ಮುಂದೆ ಸೋಂಕು ಹರಡದಂತೆ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿ ಇಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

https://youtu.be/8OKHCPqHtBc
ಕುಮಟಾ ಪುರಸಭೆ ಪ್ರಕಟಣೆ.

ಮಾಜಿ ಸಚಿವ ಆರ್.ವಿ.ಡಿ ಇಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲಹೆ ಹಾಗೂ ಸೂಚನಾ ಪತ್ರ.

ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಸಂಬಂದ ಜಿಲ್ಲಾ‌ ಉಸ್ತುವರಿ ಸಚಿವೆ ಶಶಿಕಲಾ‌ ಜೊಲ್ಲೆಯವರಿಗೆ 21 ಅಂಶಗಳನ್ನೊಳಗೊಂಡ ಸಲಹೆ ಹಾಗೂ ಸೂಚನೆಯ ಪತ್ರವನ್ನ ಮಾಜಿ ಜಿಲ್ಲಾ ಉಸ್ತುವರಿ ಸಚಿವ ಆರ್. ವಿ ದೇಶಪಾಂಡೆ ಬರೆದಿದ್ದಾರೆ.

ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಯಲ್ಲಿ ಹ್ಯಾಂಡ್ ಗ್ಲಾಸ್, ಮಾಸ್ಕ್, ಹಾಗೂ ಸ್ಯಾನಿಟೈಸರ್ ಕೊರತೆ ಇದ್ದು ಸರ್ಕಾರದಿಂದ ಪೂರೈಕೆಗೆ ಕ್ರಮ ಕೈಗೊಳ್ಳಲಿ, ಕೊರೋನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ದುಡಿಯುತ್ತಿರು ಖಾಸಗಿ ವೈದ್ಯಕೀಯ ಸಿಬ್ಬಂದಿಗಳಿಗೂ ಪ್ರಧಾನಿ ಮೋದಿ ಘೋಷಿಸಿರುವ ಐವತ್ತು ಲಕ್ಷ ವಿಮಾ ಸೌಲಭ್ಯವನ್ನ ವಿಸ್ತರಿಸುವಂತೆ ಕ್ರಮ ಕೈಗೊಳ್ಳಬೇಕು.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಸೋಂಕು ಪತ್ತೆ ತಪಾಸಣಾ ಕೇಂದ್ರವನ್ನ ಪ್ರಾರಂಭಿಸಲು ಉಸ್ತುವರಿ ಸಚಿವರು ಕ್ರಮ ಕೈಗೊಳ್ಳಲಿ. ಜಿಲ್ಲೆ ಮೂಲದ ಕೂಲಿ ಕಾರ್ಮಿಕರು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಕೆಲಸಕ್ಕೆಂದು ತೆರಳಿದ್ದಾರೆ. ಅಲ್ಲಿ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಊಟ ವಸತಿ ಇಲ್ಲದೇ ಸಮಸ್ಯೆಗೆ ಸಿಲುಕಿದ್ದಾರೆ. ಉಸ್ತುವರಿ ಸಚಿವರು ಈ ಬಗ್ಗೆ ಸಂಭಂದ ಪಟ್ಟ ಅಧಿಕಾರಿಗಳಿಗೆ ತಿಳಿಸಿ ಜಿಲ್ಲೆಯ ಮೂಲದವರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಿ.

ಜಿಲ್ಲೆಗೆ ಈಗಾಗಲೇ ಕೊರೋನಾ ವೈರಸ್ ಸೋಂಕು ಕಾಲಿಟ್ಟಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಕಾಮಗಾರಿ ಪೂರ್ತಿಯಾದ ಹಾಸ್ಟೆಲ್, ಯಾತ್ರಾ ನಿವಾಸಗಳು ಇಲಾಖೆಗೆ ಹಸ್ತಾಂತರಿಸಿಲ್ಲ. ಇವುಗಳನ್ನು ಸಹ ತಾತ್ಕಾಲಿಕ ಆಸ್ಪತ್ರೆ ಗಳನ್ನಾಗಿ ಮಾಡಿ ಚಿಕಿತ್ಸೆ ಕೊಡುವ ಕಾರ್ಯ ಮಾಡುವಂತಾಗಲಿ ಎಂದು ದೇಶಪಾಂಡೆ ಸಲಹೆ ನೀಡಿದ್ದಾರೆ.

ಹೀಗೆ ಇಪ್ಪತ್ತೊಂದು ಅಂಶಗಳನ್ನೊಳಗೊಂಡ ಪತ್ರವನ್ನ ಜಿಲ್ಲಾ ಉಸ್ತುವರಿ ಸಚಿವೆ ಶಶಿಕಲಾ ಜೊಲ್ಲೆಗೆ ದೇಶಪಾಂಡೆ ಬರೆದಿದ್ದು ತನ್ನ ಸಲಹೆ ಹಾಗೂ ಸೂಚನೆಯನ್ನ ಪರಿಗಣಿಸುವಂತೆ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ