BREAKING NEWS
Search

ಶಿವರಾಮ್ ಹೆಬ್ಬಾರ್ ಶಿಷ್ಯರಿಂದಲೇ ಬ್ರಷ್ಟಾಚಾರ! ಕಾಮಗಾರಿಗಳಿಗೆ ಮರಳು ಬದಲು ಮಣ್ಣು ಉಪಯೋಗಿಸುವ ಕಂಟ್ರಾಕ್ಟರ್ ಗಳು!

914

ಕಾರವಾರ:- ಕಾಮಗಾರಿಗಳಿಗೆ ಸಿಮೆಂಟ್, ಕಬ್ಬಿಣ ಕಡಿಮೆ‌ ಬಳಸೋದು, ಸರಿಯಾದ ಅಡಿಪಾಯ ಹಾಕದಿರುವುದು ಮುಂತಾದ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ, ಕಾಮಗಾರಿಗಳಿಗೆ ಮರಳು ಬದಲು ಮಣ್ಣು ಬಳಸಿ ಕಿಸೆ ತುಂಬಿಸೋ ಕಳ್ಳರನ್ನು ನೋಡಿದ್ದೀರಾ? ಅದು ಕೂಡಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಊರಿನಲ್ಲಿ? ಹೌದು ಸಿಮೆಂಟ್‌ಗೆ ಮಣ್ಣು ಮಿಶ್ರ ಮಾಡಿ ಅಂಗನವಾಡಿ, ಸೇತುವೆ, ಚರಂಡಿಯ ಕಳಪೆ ಕಾಮಗಾರಿ ನಡೆಸುವ ಮೂಲಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಊರಿನಲ್ಲೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಲಾಗುತ್ತಿದೆ. ಲಕ್ಷಗಟ್ಟಲೆ ಹಣದೋಚುವ ಆಸೆಯಿಂದ ಸರಕಾರಿ ಕಾಮಗಾರಿಯ ಟೆಂಡರ್ ಪಡೆದ ಕಾಂಟ್ರಾಕ್ಟರ್‌ಗಳು ಜನರ ಹಾಗೂ‌ ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಅನ್ನೋದರ ವಿವರ ಇಲ್ಲಿದೆ ಓದಿ.

ಇಂತಹ ಭಾರೀ ದೊಡ್ಡ ಅವ್ಯವಹಾರಗಳು ನಡೆಯುತ್ತಿರೋದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಊರಿನಲ್ಲೇ, ಅದು ಕೂಡಾ ಸಚಿವರ ಆಪ್ತರಾಗಿರುವ ಗುತ್ತಿಗೆದಾರರಿಂದಲೇ ಎನ್ನುವುದು ವಿಷಾದ.

ಮಣ್ಣು ಮಿಶ್ರಣಕ್ಕೆ ತಯಾರಿ ನಡೆಸಿರುವುದು.

ಸರಕಾರಿ ಕಾಮಗಾರಿಗಳ ಟೆಂಡರ್ ಪಡೆಯುವ ಯಲ್ಲಾಪುರದ ಕೆಲವು ಕಾಂಟ್ರಾಕ್ಟರ್‌ಗಳು ಲಕ್ಷಗಟ್ಟಲೆ ಹಣ ಮಾಡುವ ಉದ್ದೇಶದಿಂದ ಭಾರೀ ಅಕ್ರಮವೆಸಗುತ್ತಿದ್ದಾರೆ.

ಯಾವುದೇ ಕಾಮಗಾರಿ ನಡೆಸಬೇಕಾದರೂ ಅದರಲ್ಲಿ ಗುಣಮಟ್ಟದ ಮರಳು ಮಿಶ್ರ ಮಾಡಿಯೇ ಕೆಲಸ‌ ನಡೆಸಬೇಕು. ಆದರೆ, ಯಲ್ಲಾಪುರದ ಕಿರವತ್ತಿ, ಬೆಳಕೊಪ್ಪ, ಸೋಮಾಪುರ, ಗೌಳಿವಾಡ, ಇಂದಿರಾನಗರದಲ್ಲಿ ಮುಂತಾದೆಡೆ ನಡೆಯುತ್ತಿರುವ ಕಾಮಗಾರಿಗಳಲ್ಲಿ ಮರಳಿನ ಬದಲು ಮಣ್ಣನ್ನೇ ನೇರವಾಗಿ ಬಳಸಿ ಕಾಮಗಾರಿ ನಡೆಸಲಾಗುತ್ತಿದೆ.

ಲಕ್ಷಗಟ್ಟಲೆ ಹಣ ಜೇಬಿಗಿಳಿಸಬೇಕೆಂಬ ಉದ್ದೇಶದಿಂದ ಕಾಂಟ್ರಾಕ್ಟರ್‌ಗಳು ಜನರ‌ ಹಾಗೂ ಮಕ್ಕಳ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ.

ಕಾಮಗಾರಿ ನಡೆಸುವವರು ಅರಣ್ಯದ ನಡುವೆ ಹರಿಯುವ ನದಿ, ತೋಡುಗಳ ಬದಿಯಿಂದ ಮರಳು ಮಿಶ್ರಿತ ಮಣ್ಣು ತರುತ್ತಿದ್ದು, ಇದೇ ಮಣ್ಣನ್ನು ಕಾಮಗಾರಿಗೆ ಬಳಸುತ್ತಿದ್ದಾರೆ.

ಇಲ್ಲಿಂದ ಮರಳು ಮಿಶ್ರಿತ ಮಣ್ಣು ತರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿದಿದ್ದರೂ ರಾಜಕೀಯ ಮುಖಂಡರ ಹಾಗೂ ಪ್ರಭಾವಿಗಳ ಮಧ್ಯಪ್ರವೇಶ ದಿಂದಾಗಿ ಅರಣ್ಯಾಧಿಕಾರಿಗಳು ಕೂಡಾ ಮೌನಕ್ಕೆ ಶರಣಾಗುವಂತೆ ಮಾಡಿದೆ.

ಇನ್ನು ಕಾಂಟ್ರಾಕ್ಟರ್‌ಗಳ ಈ ಅಕ್ರಮಕ್ಕೆ ಅಧಿಕಾರಿಗಳು ಕೂಡಾ ಸಾಥ್ ನೀಡುತ್ತಿದ್ದು, ನಿಜವಾದ ಮರಳು ಬಳಸಿ ಕಾಮಗಾರಿ ನಡೆಸಬೇಕಾದಲ್ಲಿ ಮಣ್ಣು ಬಳಸಿ ಕಾಮಗಾರಿ ನಡೆಸುವುದನ್ನು ಕಂಡು ಕೂಡಾ ಕಾಣದಂತೆ ಪರ್ಸಂಟೇಜ್‌ಗಾಗಿ ಸುಮ್ಮನಿದ್ದಾರೆ.

ಕಾಂಟ್ರಾಕ್ಟರ್‌ದಾರರು ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಆಪ್ತರಾಗಿದ್ದು, ಈ ಅಕ್ರಮದಲ್ಲಿ ಸಚಿವರೂ ಭಾಗಿಯಾಗಿದ್ದಾರೆಂಬ ಆರೋಪ‌ ಸ್ಥಳೀಯವಾಗಿ ಕೇಳಿಬಂದಿದೆ.

ಎಲ್ಲಿ ಏನೇಗಿದೆ?

ಬೆಳಕೊಪ್ಪದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ, ಸೋಮಾಪುರದಲ್ಲಿ 9 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಹಾಗೂ 6 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನೀರು ಹೋಗಲೆಂದು ಸಣ್ಣ ಸೇತುವೆ, ಜಯಂತಿನಗರದಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ, ಇಂದಿರಾನಗರದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ, ಗೌಳಿವಾಡದಲ್ಲಿ ಕೇವಲ ಮಣ್ಣು ಹಾಕಿ 5 ಲಕ್ಷ ರೂ. ವೆಚ್ಚದ ರಸ್ತೆ ಮಾಡಿ ಭಾರೀ ಅಕ್ರಮ‌ ಎಸಗಲಾಗಿದ್ದು, ಈ ಕಾಮಗಾರಿಗಳು ಪಿಡಬ್ಲ್ಯೂಡಿ ಹಾಗೂ ತಾಲೂಕು ಪಂಚಾಯತ್ ಸಂಬಂಧಿಸಿದ್ದಾಗಿವೆ.

ಇನ್ನು ಸೋಮಾಪುರದಲ್ಲಿ ಕೃಷ್ಣ ನಾಯಕರ ಮನೆ ಬಳಿ 8 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ವ್ಯವಸ್ಥೆ ಮಾಡುವ ಯೋಜನೆ 2019ರಲ್ಲಿ ಹಾಕಲಾಗಿದ್ದರೂ, ರಸ್ತೆಗೆ ಮಣ್ಣು ಹಾಕಿ ಬಿಡಲಾಗಿದೆ ಹೊರತು ಚರಂಡಿ ನಿರ್ಮಾಣ ಈವರೆಗೆ ಮಾಡಲಾಗಿಲ್ಲ.

ಈಗಾಗಲೇ ಅಸ್ತಿತ್ವದಲ್ಲಿರುವ ಕಾಮಗಾರಿಗೆ ಮಣ್ಣು ಮಿಶ್ರ ಮಾಡಿಯೇ ಕೆಲಸ ನಡೆಸಲಾಗುತ್ತಿದ್ದು, ಈ ಅಕ್ರಮಕ್ಕೆ ಸಚಿವರ ಕೃಪಾ ಪೋಷಿತವಾಗಿರುವುದರಿಂದ ಯಾರೂ ಕೇಳುವವರು ಇಲ್ಲದಂತಾಗಿದೆ.

ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಆಗ್ರಹ!

ಸಚಿವರ ಊರಿನಲ್ಲಿ ಮಾತ್ರವಲ್ಲದೇ, ಜಿಲ್ಲೆಯ ಹಲವೆಡೆ ಕೂಡಾ ಕಾಮಗಾರಿಗೆ ಮಣ್ಣು ಮಿಶ್ರಣ ಮಾಡಿಯೇ ಕಾಮಗಾರಿ ನಡೆಸಲಾಗುತ್ತಿದ್ದು, ಈ ಕಳಪೆ ಕಾಮಗಾರಿಯನ್ನು ರಾಜಾರೋಷವಾಗಿ ನಡೆಸಲಾಗುತ್ತಿದೆ. ಇವುಗಳ ಬಗ್ಗೆ ತನಿಖೆ ನಡೆಸಬೇಕಲ್ಲದೇ, ಕೂಡಲೇ ಈ ಕಾಮಗಾರಿಗಳನ್ನು ನಿಲ್ಲಿಸಬೇಕೆಂದು ಡಿ.ಎಸ್.ಎಸ್

ಸಮಿತಿ ಸದಸ್ಯ ಕಲ್ಲಪ್ಪ ಎಂ. ಹೋಳಿರವರು ಹಾಗೂ ಜಿಲ್ಲಾ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ಕೃಷ್ಣಾ ಬಳೇಗಾರ್ ಒತ್ತಾಯಿಸಿದ್ದಾರೆ.

ಕೊಟ್ಟ ದುಡ್ಡು ವಸೂಲಿ ಮಾಡುತಿದ್ದಾರೆಯೇ ?


ಶಿವರಾಮ್ ಹೆಬ್ಬಾರ್ ಚುನಾವಣೆ ಸಂದರ್ಭದಲ್ಲಿ ಗೆಲ್ಲಬೇಕೆಂಬ ಏಕೈಕ ಗುರಿ ಹೊಂದಿದ್ದವರು.ಅಂತಹ ಸಂದರ್ಭದಲ್ಲಿ ಓಟಿಗಾಗಿ ನೋಟು ಎಂಬ ಧರ್ಮ ಪಾಲಿಸುವಲ್ಲಿ ಸಂಪೂರ್ಣ ಪ್ರಾಮಾಣಿಕತೆ ತೋರಿದವರು.ಹೀಗಾಗಿ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದ್ದು ಸಾಮಾನ್ಯವಾಗಿತ್ತು ಹೀಗಾಗಿ ಈಗ ಇದರ ವಸೂಲಿಗೆ ತಮ್ಮ ಶಿಷ್ಯರ ಮೂಲಕ ಕಾಮಗಾರಿ ಕೊಡಿಸಿ ಅದರ ಲಾಭ ಪಡೆಯಲು ಹೆಬ್ಬಾರ್ ಹೊರಟಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಸದಾ ಕ್ರಿಯಾಶೀಲರಾಗಿರುವ ಸಚಿವ ಹೆಬ್ಬಾರ್ ತಮ್ಮ ಕ್ಷೇತ್ರದ ಪ್ರತಿ ಕಾಮಗಾರಿಯ ಇಂಚಿಂಚು ಲೆಕ್ಕ ಪಕ್ಕಾ ಇಟ್ಟವರು.ಕುದ್ದು ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಯನ್ನು ವೀಕ್ಷಿಸಿ ಬರುವ ಇವರಿಗೆ ತಮ್ಮ ಶಿಷ್ಯರೇ ಬ್ರಷ್ಟಾಚಾರ ಮಾಡಿ ಕಳಪೆ ಕಾಮಗಾರಿ ಮಾಡುತ್ತಿರುವ ಅರಿವು ಅವರಿಗಿಲ್ಲದಷ್ಟು ದಡ್ಡರಲ್ಲ ಎಂಬುದು ಮಾತ್ರ ಸತ್ಯ.
ಈಗಾಗಲೇ ಪ್ರವಾಹದಿಂದಾಗಿ ಜಿಲ್ಲೆಯ ಅದೆಷ್ಟೋ ರಸ್ತೆ ಸೇತುವೆಗಳು ಕೊಚ್ಚಿ ಹೋಗಿವೆ. ಹೀಗಿರುವಾಗ ತನ್ನ ಕ್ಷೇತ್ರಕ್ಕೇ ಈ ರೀತಿ ಕಣ್ಣಿದ್ದು ಕಾಣದಂತೆ ಯುದಿಷ್ಟಿರನಂತಿರುವುದು ಎಷ್ಟು ಸರಿ? ಕ್ಷೇತ್ರದ ರಸ್ತೆಗಳೇ ಕಳಪೆಗಳಾದರೆ ಮುಂದೇನು? ಇದಕ್ಕೆ ಸಚಿವರೇ ತಮ್ಮ ಪ್ರಭಾವಳಿ ಬಿಟ್ಟು ಉತ್ತರಿಸಬೇಕಿದೆ.

ಈ ಕುರಿತು ಚಿಲ್ಲಾಡಳಿತ ಕೂಡ ಕ್ರಮ ಕೈಗೊಳ್ಳಬೇಕಿದೆ.
Leave a Reply

Your email address will not be published. Required fields are marked *