ಸೀಬರ್ಡ್ ನೌಕಾನೆಲೆ ವಿಸ್ತರಣೆ-ಭೂ ಸ್ವಾಧೀನ ಪ್ರಕ್ರಿಯೆ ಆರಂಭ

372

ಅಂಕೋಲಾ: ಸೀಬರ್ಡ್ ನೌಕಾನೆಲೆ ಮೂರನೇ ಹಂತದ ವಿಸ್ತರಣ ಪ್ರಕ್ರಿಯೆ ಪ್ರಾರಂಭವಾಗಿದ್ದು, 3453 ಎಕರೆ ಜಮೀನಿನ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಾಲೂಕು ಆಡಳಿತಕ್ಕೆ ತಿಳಿಸಿದೆ.

ದೇಶದ ಭದ್ರತೆಹೆಚ್ಚು ಮಹತ್ವವಾದ ಈ ಯೋಜನೆ ಏಷ್ಯಾದಲ್ಲಿಯೇ ಅತಿ ದೊಡ್ಡದು. ತಾಲೂಕಿನ ಕೆಲವು ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ನೌಕಾನೆಲೆ ವಿಶೇಷ ಭೂಸ್ವಾಧೀನ ಅಧಿಕಾರಿ ಕಾರ್ಯಾಲಯದಿಂದ ಸೂಚನೆ ನೀಡಿದೆ. ಆದ್ದರಿಂದ ತಾಲೂಕಿನ ಗಂಗಾವಳಿ ನದಿಯ ಅಂಚಿನ ಮಂಜಗುಣಿ, ಹೊನ್ನೇಬೈಲ್, ವಾಡಿಬುಗ್ರಿ, ಶಿಂಗನಮಕ್ಕಿ, ಬಾಸಗೋಡ ಮತ್ತು ಬಿಳೆಹೊಂಗಿ ಗ್ರಾಮದ ಜಮೀನುಗಳ ಸಮೀಕ್ಷೆ ನಡೆಸಿ ತಾಲೂಕಾಡಳಿತ ವರದಿ ಒಪ್ಪಿಸಬೇಕಿದೆ.

ರಾಷ್ಟ್ರೀಯ ಸುರಕ್ಷತೆ ಮತ್ತು ದೇಶದ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಕುರಿತು ಭೂಸ್ವಾಧೀನ ಕಾಯ್ದೆ ಅನ್ವಯ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.
ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಭೂ ದಾಖಲೆಗಳ ಕಚೇರಿ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ಅಂಕೋಲಾ ತಹಶೀಲ್ದಾರ್ ಅವರು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಬೇಕಿದೆ.

ಸಮೀಕ್ಷೆಗೆ ಒಳಪಡುವ ಗ್ರಾಮದಲ್ಲಿರುವ ಮರಗಳು ಮತ್ತು ಮಾಲ್ಕಿ ಜಮೀನಿನ ಅಂದಾಜು ಮೌಲ್ಯವನ್ನು ಪಟ್ಟಿ ಮಾಡಲಾಗುತ್ತದೆ. ಗಂಗಾವಳಿ ತೀರದ ಗ್ರಾಮಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಿವೆ. 60-70 ವರ್ಷಗಳ ಹಿಂದಿನ ಮರಗಳು ಸಹ ಇವೆ. ಮೀನುಗಾರರು ಮತ್ತು ಹಾಲಕ್ಕಿ ಜನಾಂಗದವರು ವಾಸಿಸುತ್ತಿದ್ದಾರೆ.

ನೌಕಾನೆಲೆ ಈ ಭೂಪ್ರದೇಶವನ್ನು ವಶಪಡಿಸಿಕೊಳ್ಳುವುದುರಿಂದ ತಾಲೂಕಿನ ಸಾಂಪ್ರದಾಯಿಕ ಮೀನುಗಾರಿಕೆ ಕಣ್ಮರೆಯಾಗಲಿದೆ. ನೂರಾರು ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡ ಜನರ ಬದುಕು ಸಹ ಅಸ್ತವ್ಯಸ್ತವಾಗಲಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ