ರಾಮಮಂದಿರ ಶಿಲಾನ್ಯಾಸ ಹಿನ್ನಲೆಯಲ್ಲಿ ನಾಳೆ ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿ

1495

ಕಾರವಾರ:- ನಾಳೆ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ
ತಾಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರನ್ವಯ ನಾಳೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ರವರೆಗೆ ನಿಷೇದಾಜ್ಞೆಯನ್ನು ಹೊರಡಿಸಲಾಗಿದೆ.

ಈ ಬಗ್ಗೆ ತಹಶಿಲ್ದಾರ್ ಎಸ್.ರವಿಚಂದ್ರ ಆದೇಶ ಹೊರಡಿಸಿದ್ದು ಅದರ ಪ್ರತಿ ಇಲ್ಲಿದೆ.

ಭಟ್ಕಳ ತಾಲ್ಲೂಕು ಮತೀಯವಾಗಿ ಮತ್ತು ರಾಜಕೀಯವಾಗಿ ಅತೀ ಸೂಕ್ಷ್ಮ ಪ್ರದೇಶವಾಗಿದೆ. ನಾಳೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಭೂಮಿ ಪೂಜೆ ಕಾರ್ಯಕ್ರಮವನ್ನು ಪ್ರಧಾನಮಂತ್ರಿಗಳು ನೆರವೇರಿಸಲಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಸ್ವಾಗತಿಸಿ ಹಾಗೂ ಬೆಂಬಲಿಸಿ ಬಿಜೆಪಿ ಪಕ್ಷ ಸೇರಿದಂತೆ ಹಿಂದೂಪರ ಸಂಘಟನೆಗಳು ಭಟ್ಕಳ ಶಹರ ಠಾಣೆ ವ್ಯಾಪ್ತಿ, ಭಟ್ಕಳ ಗ್ರಾಮೀಣ ಠಾಣೆ, ಮತ್ತು ಮುರ್ಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಶ್ರೀರಾಮ ಮಂದಿರ ಹಾಗೂ ಹನುಮ ಮಂದಿರ ಮತ್ತು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ಕಾರ್ಯಕ್ರಮಗಳ ಮೂಲಕ ಮೆರವಣಿಗೆ, ಗುಂಪು ಸೇರಿ ಸಿಹಿ ಹಂಚುವ ಕಾರ್ಯಕ್ರಮಗಳು ನಡೆಯುವ ಸಂಭವವಿದ್ದು ಈ ಸಂದರ್ಭದಲ್ಲಿ ಯಾವುದೇ ಗಲಭೆಗಳಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶ ಮಾಡಲಾಗಿದೆ.ಇದಲ್ಲದೇ
SDPI ಪಕ್ಷದ ಪ್ರತಿನಿಧಿಗಳು ಅದೇ ದಿನ ಸಂಜೆ 4.30ಕ್ಕೆ ತಹಶಿಲ್ದಾರರ ಕಾರ್ಯಾಲಯದ ಎದುರು ನಿಂತು ‘ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ತ್ರಿವಳಿ ತಲಾಕ್ ಕಾನೂನು ಬಗ್ಗೆ ಪ್ರತಿಭಟನೆ’ ಮಾಡುವ ಉದ್ದೇಶವನ್ನು ಹೊಂದಿರುತ್ತಾರೆ. ಈ ಹಿನ್ನಲೆಯಲ್ಲಿ ಭಟ್ಕಳವು ಅತಿ ಸೂಕ್ಷ್ಮ ಪ್ರದೇಶ ಹಾಗೂ ಮತೀಯ ಕೋಮು ಗಲಭೆಗಳು ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಈ ಹಿಂದೆ ಮತೀಯ ಗಲಭೆಗಳು ನಡೆದ ಜೀವ ಹಾನಿ ಸಾರ್ವಜನಿಕ ಸ್ವತ್ತುಗಳ ಹಾನಿಯಾಗಿ ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ತೊಡಕು ಉಂಟಾದ ಬಗ್ಗೆ ಸಾಕಷ್ಟು ಪ್ರಕರಣಗಳು ದಾಖಲಾಗಿರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ತಾಲೂಕಿನಾದ್ಯಂತ ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಘಟನೆಗಳು ನಡೆಯದಂತೆ ಅವುಗಳನ್ನು ತಡೆಗಟ್ಟುವ ಉದ್ದೇಶದಿಂದ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿಷೇಧಾಜ್ಞೆಯ ಸಮಯದಲ್ಲಿ ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ಕೋಲುಗಳು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಪಟಾಕಿಗಳನ್ನು ಸಿಡಿಸುವುದು, ಯಾವುದೇ ಕಾರಕ ಪಧಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು ಅಥವಾ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಲಾಗಿದೆ.

ವ್ಯಕ್ತಿಗಳ ಅಥವಾ ಶವಗಳ ಆಕೃತಿಗಳ ಅಥವಾ ಪ್ರತಿ ಕೃತಿಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಅಥವಾ ಸಾರ್ವಜನಿಕ ಸುವ್ಯವಸ್ಥೆ ಭಾದೆಯನ್ನುಂಟು ಮಾಡಬಹುದಾದ ಅಥವಾ ರಾಜ್ಯ/ ದೇಶದ ಭದ್ರತೆಯನ್ನು ಕುಗ್ಗಿಸುವ, ಕಡೆಗಣಿಸಬಹುದಾದ ಅಥವಾ ಅಪರಾಧವನ್ನು ಮಾಡಲು ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಮಾಡುವುದು ರಾಷ್ಟ್ರೀಯ ಭಾವೈಕ್ಯತೆ ಕುಂದುಂಟಾಗಿ ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶ ಭರಿತ ಭಾಷಣ ಮಾಡುವುದು, ಇಂಗಿತ, ಸೂಚನೆಗಳ ಅಥವಾ ಅಂಕ ನಿರೂಪಣೆಗಳನ್ನು ಉಪಯೋಗ ಮಾಡುವುದು ಮತ್ತು ಚಿತ್ರಗಳನ್ನು ಸಂಕೇತಗಳನ್ನು, ಭಿತ್ತಿ ಪತ್ರಗಳನ್ನು ಅಥವಾ ಇತರ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಪಟಾಕಿ ಸಿಡಿಸುವುದು, ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಭಟ್ಕಳ ತಾಲೂಕಿನಾದ್ಯಂತ ಪಟಾಕಿ ಮಾರಾಟ ಮಾಡುವ ಪರವಾನಿಗೆದಾರರು ಅಂಗಡಿಗಳನ್ನು ಮುಚ್ಚುವುದು ಮತ್ತು ಪಟಾಕಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ತಾಲ್ಲೂಕು ಆಡಳಿತದಿಂದ ಅನುಮತಿ ಪಡೆದು ನಡೆಸುತ್ತಿರುವ ಮದುವೆ ಕಾರ್ಯಕ್ರಮಕ್ಕೆ ವಿಧಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದವರು ಪ್ರಕಣಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ