ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ-ಹಲವು ಕಡೆ ಪ್ರವಾಹ!

1770

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ವರುಣನ ಅಬ್ಬರ ಹೆಚ್ಚಾಗಿದ್ದು ಜಿಲ್ಲೆಯ ಹಲವು ಭಾಗದಲ್ಲಿ ಮಳೆಯ ಅಬ್ಬರಕ್ಕೆ ಮನೆಗಳು ಹಾಗೂ ಕೃಷಿ ಭೂಮಿ ಜಲಾವೃತವಾಗಿದ್ದು ಗುಡ್ಡ ಕುಸಿತ ಸಹ ಸಂಭವಿಸಿದೆ. ಈ ಕುರಿತು ವಿಡಿಯೊ ಸಹಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು ಸಂಜೆ ವೇಳೆಯಲ್ಲಿ ಇಡೀ ಜಿಲ್ಲೆಯಲ್ಲಿ ಪ್ರವಾಹವನ್ನು ಸೃಷ್ಟಿಸಿದೆ. ಜಿಲ್ಲೆಯ ಕಾರವಾರದ ಕದ್ರಾ ಭಾಗದಲ್ಲಿ ಮಳೆಯ ಅಬ್ಬರಕ್ಕೆ ಕಾಳಿ ನದಿ ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಮಹಾಮಾಯಿ ದೇವಸ್ಥಾನ ಜಲಾವೃತವಾಗಿದೆ.ಕದ್ರಾ-ಜೋಯಿಡಾ ಹೆದ್ದಾರಿಯ ಅಣಶಿ ಬಳಿ ಸಹ ಮಳೆಯಿಂದ ಗುಡ್ಡ ಕುಸಿದಿದೆ.

ಅರೆಬೈಲು ಗಟ್ಟದಲ್ಲಿ ಮಣ್ಣು ತೆರವು ಮಾಡುತ್ತಿರುವುದು.

ಅಂಕೋಲದಲ್ಲಿ ಸುಂಕಸಾಳ ಬಳಿ ಗಂಗಾವಳಿ ನದಿ ಉಕ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಹುಬ್ಬಳ್ಳಿ -ಅಂಕೋಲ ಮಾರ್ಗ ಸಂಪೂರ್ಣ ಬಂದ್ ಆಗಿದ್ದು ,ಯಲ್ಲಾಪುರ ಭಾಗದ ಅರೆಬೈಲ್ ಗಟ್ಟದಲ್ಲಿ ಗುಡ್ಡ ಕುಸಿತವಾಗಿ ಅಲ್ಲಿಯೂ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ವಿಡಿಯೋ ನೋಡಿ:-

ಇನ್ನು ಜೋಯಿಡಾದಲ್ಲಿ ಶಾಲೆಯೊಂದು ಕುಸಿದು ಬಿದ್ದಿದ್ದು ಕಾತೇರಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ.ಶಿರಸಿ ನಗರದಲ್ಲಿ ಸಹ ಅಬ್ಬರದ ಮಳೆಗೆ ನಗರದ ಆದರ್ಶ ನಗರ,ಸಮೃದ್ಧಿ ನಗರ,ವಿಶಾಲನಗರ,ಪ್ರಗತಿ ನಗರ ಬಡಾವಣೆಯಲ್ಲಿ ರಸ್ತೆ,ಮನೆಗಳಲ್ಲಿ ನೀರು ನುಗ್ಗಿದೆ. ಶಿರಸಿ ತಾಲೂಕಿನ ಪ್ರಸಿದ್ಧ ಬಂಗಾರೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದ್ದು ಬನವಾಸಿ ಹಾಗೂ ಸಿದ್ದಾಪುರ ಭಾಗದಲ್ಲಿ ವರದಾ ನದಿ ಉಕ್ಕಿ 100 ಎಕರೆ ಗೂ ಹೆಚ್ಚು ಕೃಷಿ ಭೂಮಿ ಜಲಾವೃತವಾಗಿದೆ.

ಶಿರಸಿ ಯಲ್ಲಿ ದೇವಸ್ಥಾನ ಜಲಾವೃತ.

ಸಮುದ್ರತೀರದಲ್ಲಿ ಕಡಲಕೊರೆತ ಉಂಟಾಗಿದ್ದು ಮೀನುಗಾರರ ಬಲೆ ಬೋಟ್ ಗಳು ಕೊಚ್ಚಿ ಹೋಗಿವೆ. ಜಿಲ್ಲೆಯಾದ್ಯಂತ ಈವರೆಗೆ 18 ಮನೆಗಳು ಸಂಪೂರ್ಣ ಕುಸಿದಿದ್ದು, 200ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಲ್ಲದೆ ಕಳೆದ ಹತ್ತು ದಿನದಲ್ಲಿ ಮಳೆಯಿಂದಾಗಿ ಯಲ್ಲಾಪುರ ಹಾಗೂ ಶಿರಸಿಯಲ್ಲಿ ತಲಾ ಓರ್ವರು ಸಾವನ್ನಪ್ಪಿದ್ದಾರೆ. 2019 ರಲ್ಲಿ ಪ್ರವಾಹ ಸೃಷ್ಟಿಯಾದ ಕಾರಣ ಜಲಾಶಯಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದ್ದು ಎಚ್ಚರಿಕೆ ವಹಿಸಲಾಗಿದೆ.

ಜಿಲ್ಲೆಯ ಕರಾವಳಿ ತಾಲ್ಲೂಕುಗಳು ಸೇರಿದಂತೆ ಘಟ್ಟದ ಮೇಲಿನತಾಲ್ಲೂಕುಗಳಲ್ಲೂ ಎಡಬಿಡದೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಯತೇಚ್ಚವಾಗಿ ನೀರು ಹರಿದು ಬರಲಾರಂಭಿಸಿದೆ.

ಅರೆಬೈಲ್ ನಲ್ಲಿ ಗುಡ್ಡ ಕುಸಿತ.

ಇನ್ನು ಜಿಲ್ಲೆಯ ಜಲಾಶಯಗಳು ಭರ್ತಿಯಾಗಿದ್ದು ,ಕೊಡಸಳ್ಳಿ ಜಲಾಶಯದ 4 ಗೇಟ್‌ಗಳ ಮೂಲಕ 22,393 ಕ್ಯೂಸೆಕ್ ಹಾಗೂ ಕದ್ರಾ ಜಲಾಶಯದಿಂದ ಒಟ್ಟು 8 ಗೇಟ್ ಗಳ ಮೂಲಕ 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿಬಿಡಲಾಗಿದೆ.

ಕದ್ರಾ ಜಲಾಶಯದಲ್ಲಿ ನೀರು ಬಿಡುಗಡೆ ವಿಡಿಯೊ ನೋಡಿ:-

ಉತ್ತರಕನ್ನಡದಲ್ಲಿ ವರುಣನ ಆರ್ಭಟ ಹೀಗೆಯೇ ಮುಂದುವರೆದಲ್ಲಿ ಹಲವು ಪ್ರದೇಶಗಳು ಪ್ರವಾಹದಿಂದ ಜಲಾವೃತವಾಗಿ ಗಂಡಾಂತರ ಸೃಷ್ಟಿಯಾಗುವ ಸಾಧ್ಯತೆ ಇದ್ದು ಜನ ಭಯದಲ್ಲೇ ಕಾಲ ಕಳೆಯುವಂತಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ