BREAKING NEWS
Search

ಉತ್ತರ ಕನ್ನಡ ದಲ್ಲಿ ಅಬ್ಬರುಸಿದ ವರುಣ-ಪ್ರಸಿದ್ದ ಯಾಣ ಸೇರಿ ಹಲವು ಕಡೆ ಗುಡ್ಡ-ಮನೆಗಳಿಗೆ ನೀರು- ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

236

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರಗಳು ಮುಂದುವರಿದಿದೆ. ಇಂದು ಬಿಟ್ಟುಬಿಡದೇ ಬೆಳಿಗ್ಗೆಯಿಂದ ವರುಣನ ಅಬ್ಬರ ಹೆಚ್ಚಾಗಿದ್ದು ಅಬ್ಬರದ ಮಳೆ ಸುರಿಯುತ್ತಿದೆ.
ಇದರಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಹೊನ್ನಾವರ ತಾಲೂಕಿನ ಗುಂಡಬಾಳ, ಭಾಸ್ಕೇರಿ, ಸಾಲ್ಕೋಡ್, ಬಡಗಣೆ ಹೊಳೆಯು ತುಂಬಿದ್ದು, ಗುಂಡಬಾಳ, ಚಿಕ್ಕನಕೋಡ್, ಗುಂಡಿಬೈಲ್, ಹಾಡಗೇರಿ, ಮುಟ್ಟಾ, ಹಡಿನಬಾಳ, ಭಾಸ್ಕೇರಿ, ಗಜನಿಕೇರಿ, ದೊಡ್ಡಹಿತ್ತಲ್, ರ‍್ನಕೇರಿ, ಕೋಣಾರ್, ಕರ್ಕಿ, ಕಡತೋಕಾ ಭಾಗದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಕಂದಾಯ, ಪೋಲಿಸ್, ಪಂಚಾಯತಿ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡೆಲ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಂತ್ರಸ್ತರನ್ನು ಕಾಳಜಿ ಕೇಂದ್ರದತ್ತ ಕರೆದೊಯ್ಯುತ್ತಿದ್ದಾರೆ. ತಹಶೀಲ್ದಾರ ವಿವೇಕ ಶೇಣ್ವಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಮಳೆ ಕಡಿಮೆಯಾಗುವವರೆಗೆ ಕಾಳಜಿ ಕೇಂದ್ರಕ್ಕೆ ಬರಲು ನೆರೆಯ ಭೀತಿ ಎದುರಿಸುತ್ತಿರುವ ಕುಟುಂಬಗಳಿಗೆ ಮನವಿ ಮಾಡಿದ್ದಾರೆ.

ಸರ್ಕಾರ ಸಕಲ ರೀತಿಯು ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ. ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರಕ್ಕಾಗಿ ಹೆಚ್ಚುವರಿ ಕೊಠಡಿಗಳನ್ನು ಒದಗಿಸಲಾಗುವುದು. ಊಟ ವಸತಿಯ ಜೊತೆ ಆರೋಗ್ಯ ತಪಾಸಣೆ ಕೂಡ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ರಸ್ತೆ ಸಂಪರ್ಕ ಸ್ಥಗಿತ

ಶಿರಸಿ- ಕುಮಟಾ ಹೆದ್ದಾರಿ ಜಲಾವೃತಗೊಂಡ ಹಿನ್ನಲೆಯಲ್ಲಿ ಹೆದ್ದಾರಿ ಸಂಚಾರವನ್ನು ತಾತ್ಕಾಲಿಕವಾಗಿ ಈ ಭಾಗದಲ್ಲಿ ಸ್ಥಗಿತಗೊಳಿಸಲಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವ ಕಾರಣ ಕುಮಟಾ ಕತಗಾಲ್ ಬಳಿ ಹೆದ್ದಾರಿಯ ಮೇಲೆ ನೀರು ನಿಂತಿದೆ. ಹೀಗಾಗಿ ಈ ಭಾಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಶಿರಸಿಯ ಜಾಜಿ ಗುಡ್ಡೆ ಕುಮಟಾದ ಯಾಣ ದಲ್ಲಿ ಗುಡ್ಡ ಕುಸಿತ

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಶಿರಸಿ,ಸಿದ್ದಾಪುರ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ.ಒಂದೆಡೆ ಶಿರಸಿಯ ಜಾಜಿ ಗುಡ್ಡೆ ಗ್ರಾಮದಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿ ಸಂಭವಿಸುವ ಭೀತಿ ಎದುರಾಗಿದೆ.ಈ ಭಾಗದಲ್ಲಿ ಎಂಟು ಕುಟುಂಬಗಳು ವಾಸವಿದ್ದು ಗುಡ್ಡ ಮತ್ತೆ ಕುಸಿಯುವ ಸಾಧ್ಯತೆಗಳಿದ್ದು ಕ್ಷಣದಲ್ಲಿ ಮನೆಗಳನ್ನು ಕಾಲಿ ಮಾಡುವಂತೆ ಶಿರಸಿ ತಾಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಆದರೇ ಈ ಮಳೆಯಲ್ಲಿ ವ್ಯವಸ್ಥೆಯನ್ನೇ ಕಲ್ಪಿಸದೇ ಸ್ಥಳಾಂತರವಾಗಲು ಹೇಳಿದ್ದರಿಂದ ಇಲ್ಲಿನ ಜನರು ಪರ್ಯಾಯ ವ್ಯವಸ್ಥೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕುಮಟಾ ಭಾಗದ ಪ್ರಸಿದ್ಧ ಯಾಣ ಬೈರವೇಶ್ವರ ದೇವಾಲಯದಬಳಿ ಗುಡ್ಡ ಕುಸಿದು ಶಿಖರದ ಬಳಿಇರುವ ಮೂರು ಅಂಗಡಿಗಳ ಮೇಲೆ ಬಿದ್ದ ಭಾರೀ ಪ್ರಮಾಣದ ಮಣ್ಣು ಕುಸಿತ ಕಂಡಿದ್ದು ಯಾಣ ಕ್ಕೆ ಸಂಪರ್ಕ ಕಡಿತಗೊಂಡಿದೆ.

ತುಂಬಿ ಹರಿದ ನದಿಗಳು


ಜಿಲ್ಲೆಯ

ಅಘನಾಶಿನಿ,ಗಂಗಾವಳಿ,ಕಾಳಿ,ಶರಾವತಿ,ಚಂಡಿಕಾ,ವರದಾ ನದಿಗಳು ತುಂಬಿ ಹರಿಯುವ ಮೂಲಕ ಪ್ರವಾಹ ಸೃಷ್ಟಿಸಿದೆ.
ಪ್ರವಾಹದಿಂದ 36 ಗ್ರಾಮಗಳು ಭಾಧಿತವಾಗಿದ್ದು
ಈ ವರೆಗೆ ಪ್ರವಾಹದಿಂದ ಓರ್ವ ವ್ಯಕ್ತಿ ಮೃತರಾಗಿದ್ದಾರೆ. 11 ಮನೆಗಳು ಪ್ರವಾಹದಿಂದ ತೀರ್ವ ಹಾನಿಯಾಗಿದ್ದು 209 ಮನೆಗಳು ಭಾಗಶಃ ಹಾನಿಯಾಗಿದೆ. 4 ಸೇತುವೆಗಳು ಪ್ರವಾಹದಿಂದ ಮುಳುಗಡೆಯಾಗುದ್ದು 10 ರಸ್ತೆಗಳು ಸಂಪರ್ಕ ಕಡಿತಗೊಂಡಿದೆ.ಜಿಲ್ಲೆಯಾಧ್ಯಾಂತ ಈವರೆಗೆ 18 ಕಾಳಜಿ ಕೇಂದ್ರ ತೆರೆಯಲಾಗಿದ್ದು 699 ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಇನ್ನು ಇಂದಿನ ವರೆಗೆ ಪ್ರವಾಹದಿಂದ 125 ಹೆಕ್ಟೇರ್ ಕೃಷಿ ಕ್ಷೇತ್ರ
536.98 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರ ಗಳಿಗೆ ಹಾನಿ ಸಂಭವಿಸಿದೆ.

ಇಂದಿನ ಜಿಲ್ಲೆಯ ಮಳೆ ಪ್ರಮಾಣ ಹಾಗೂ ಜಲಾಶಯದ ಮಟ್ಟ ಹೀಗಿದೆ:-
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 73.2 ಮಿ.ಮೀ, ಭಟ್ಕಳ 202.8 ಮಿ.ಮೀ, ಹಳಿಯಾಳ 3.6 ಮಿ.ಮೀ, ಹೊನ್ನಾವರ 115.0 ಮಿ.ಮೀ, ಕಾರವಾರ 42.4 ಮಿ.ಮಿ, ಕುಮಟಾ 137.8 ಮಿ.ಮೀ, ಮುಂಡಗೋಡ 5.2 ಮಿ.ಮೀ, ಸಿದ್ದಾಪುರ 63.4 ಮಿ.ಮೀ ಶಿರಸಿ 74.5 ಮಿ.ಮೀ, ಜೋಯಡಾ 53.4ಮಿ.ಮೀ, ಯಲ್ಲಾಪುರ 5.4 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ

ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 30.62 ಮೀ (2020), 19054.00 ಕ್ಯೂಸೆಕ್ಸ್ (ಒಳಹರಿವು) 15478.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 71.05 ಮೀ. (2020), 10461.0 ಕ್ಯೂಸೆಕ್ಸ್ (ಒಳ ಹರಿವು) 8663.0 (ಹೊರಹರಿವು) ಸೂಪಾ: 564.00 ಮೀ (ಗ), 542.70 ಮೀ (2020), 21887.847 ಕ್ಯೂಸೆಕ್ಸ್ (ಒಳ ಹರಿವು), 0.000 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 461.91 ಮೀ (2020), 1749.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 436.20 ಮೀ (2020), 1737.0 ಕ್ಯೂಸೆಕ್ಸ್ (ಒಳ ಹರಿವು) 3400.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 51.75ಮೀ (2020) 7229.00 ಕ್ಯೂಸೆಕ್ಸ್ (ಒಳ ಹರಿವು) 6760.00 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕ್ಕಿ:- 1819.00 ಅಡಿ (ಗ), 1791.70 ಅಡಿ (2020)

ಆರೆಂಜ್ ಅಲರ್ಟ್ ಘೋಷಣೆ

ಮುಂದಿನ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇಂದು ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.

ಕರಾವಳಿ ಭಾಗದಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಕಡಲತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳದಂತೆ ನಿಷೇಧಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ