BREAKING NEWS
Search

ಗೋವಾ ದಿಂದ ಕಂಟೈನರ್ ನಲ್ಲಿ ಮದ್ಯ ಸಾಗಾಟ-ಅಬಕಾರಿ ಪೊಲೀಸರಿಂದ ವಶ

628

ಕಾರವಾರ: ಕಂಟೇನರ್ ನಲ್ಲಿ ಅಕ್ರಮವಾಗಿ ಗೋವಾ ದಿಂದ ಕರ್ನಾಟಕದ ಗಡಿಭಾಗಕ್ಕೆ ಸಾಗಾಟ ಮಾಡುತ್ತಿದ್ದ ಗೋವಾ ರಾಜ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ಕಾರವಾರ ತಾಲೂಕಿನ ಮಾಜಾಳಿ ಗಡಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಮೀನು ಸಾಗಾಣಿಕೆಯ ಕಂಟೈನರ್ ನಲ್ಲಿ 45 ಲೀ. ಗೋವಾ ಮದ್ಯ ಹಾಗೂ 36 ಲೀ. ಬಿಯರ್ ಅನ್ನು ಸಾಗಿಸಲಾಗುತ್ತಿತ್ತು. ಗಡಿಯಲ್ಲಿ ತಪಾಸಣೆ ವೇಳೆ ಕಂಟೈನರ್ ನಲ್ಲಿ ಮದ್ಯ ಇರುವುದು ಪತ್ತೆಯಾಗಿದೆ.

ತಕ್ಷಣ ಕಂಟೇನರ್ ಅನ್ನು ವಶಕ್ಕೆ ಪಡೆದ ಅಬಕಾರಿ ಸಿಬ್ಬಂದಿ, ಆರೋಪಿ ವಿ.ಪರಶುರಾಮಣ್ಣ ಎನ್ನುವವನನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿಪಡಿಸಿಕೊಂಡ ಮದ್ಯದ ಒಟ್ಟು ಮೌಲ್ಯ 50 ಸಾವಿರ ರೂ.ಗಳಾಗಿದ್ದು, ಕಂಟೇನರ್ ಮೌಲ್ಯ 20 ಲಕ್ಷದ್ದಾಗಿದೆ.

ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತ ವೈ.ಆರ್.ಮೋಹನ್ ಅವರ ಮಾರ್ಗದರ್ಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕಿ ಸುವರ್ಣ ನಾಯ್ಕ ಅವರ ನೇತೃತ್ವದಲ್ಲಿ, ಮಾಜಾಳಿ ಚೆಕ್ ಪೋಸ್ಟ್ ನ ಅಬಕಾರಿ ಉಪನಿರೀಕ್ಷಕ ಆರ್.ಎನ್.ನಾಯಕ, ಅಬಕಾರಿ ರಕ್ಷಕರಾದ ಯು.ಕೆ.ಗೌಡ ವಿಶಾಲ್ ನಾಯಕ್, ಹೇಮಚಂದ್ರ ಈರಣ್ಣನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿ ದಿನ ಗೋವಾ ದಿಂದ ಬರುತ್ತಾ ಮದ್ಯ?

ಕಾರವಾರವು ಗೋವಾ- ಕರ್ನಾಟಕದ ಗಡಿ ತಾಲೂಕಾಗಿದೆ. ಎರಡೂ ರಾಜ್ಯದ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳಿವೆ. ಕಾರವಾರದ ಮಾಜಾಳಿಯಲ್ಲಿ ಕರ್ನಾಟಕ ಹಾಗೂ ಗೋವಾದ ಪೊಳೆಮ್ ನಲ್ಲಿ ಅವರ ಚೆಕ್ ಪೋಸ್ಟ್ ಇದೆ. ಎರಡೂ ಚೆಕ್ ಪೋಸ್ಟ್ ಸುಮಾರು 200 ಮೀ. ಅಂತರದಲ್ಲಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡೂ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಯುತ್ತಿದೆ. ಆದರೆ, ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಂಟೇನರ್ ಅನ್ನು ಗೋವಾ ಚೆಕ್ ಪೋಸ್ಟ್ ಸಿಬ್ಬಂದಿ ಬಿಟ್ಟು ಕಳುಹಿಸಿದ್ದಾರೆ.

ಗೋವಾ ದಿಂದ ಕರಾವಳಿ ಭಾಗಕ್ಕೆ ಮೀನುಗಳು ಸರಬರಾಜಾಗುತ್ತಿದೆ. ಆದರೂ ಎಲ್ಲವನ್ನು ಚಕ್ ಮಾಡಿ ಗಡಿಯೊಳಗೆ ಬಿಡಲಾಗುತ್ತದೆ.ಆದರೇ ಇಷ್ಟು ದೊಡ್ಡ ಕಂಟೇನರ್ ನಲ್ಲಿ ಬಾಕ್ಸ್ ಗಟ್ಟಲೆ ಮದ್ಯ ಸಾಗಾಟವಾದರೂ ಗೋವಾ ಚೆಕ್ ಪೋಸ್ಟ್ ಸಿಬ್ಬಂದಿ ಮೌನ ವಹಿಸಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವವಾಗಿದ್ದು ಪ್ರತಿ ದಿನ ಮೀನಿನ ವಾಹನಗಳಲ್ಲಿ ಮದ್ಯ ವನ್ನು ಕರ್ನಾಟಕದ ಕಡೆ ಸಾಗಿಸಲಾಗುತ್ತಿದೆಯೇ ಎಂವ ಅನುಮಾನ ಮೂಡತೊಡಗಿದೆ.

ಗೋವಾ ಮದ್ಯಕ್ಕೆ ಬರ್ಜರಿ ಡಿಮ್ಯಾಂಡ್!

ಲಾಕ್ ಡೌನ್ ನಿಂದಾಗಿ ಎಲ್ಲೆಡೆ ಮದ್ಯದಂಗಡಿಗಳು ಮುಚ್ಚಿವೆ. ಹೀಗಾಗಿ ಇದೀಗ ಮದ್ಯಕ್ಕೆ ಚಿನ್ನದ ಬೆಲೆ ಬಂದಿದೆ. 100 ರೂ.ಗಳಿದ್ದ ಚಿಕ್ಕ ಬಾಟಲಿಗೆ ಈಗ ಸಾವಿರ ರೂಪಾಯಿ ಅಂತಂದರೂ ಖರೀದಿಸುವವರಿದ್ದಾರೆ. ಹೀಗಾಗಿ ಅಕ್ರಮವಾಗಿ ಗೋವಾದಿಂದ ಕಡಿಮೆ ದರಕ್ಕೆ ಮದ್ಯ ತಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ .
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ