BREAKING NEWS
Search

ಕಾಮಣ್ಣನ ಹಬ್ಬಕ್ಕಾಗಿ ಬೀದಿಗೆ ಬಂದ್ರು ಈಶ್ವರ ,ಜಾಂಬುವಂತ! ಕರಾವಳಿಯಲ್ಲಿ ಹೋಳಿ ರಂಗಿಗೆ ಸುಗ್ಗಿ ಕುಣಿತ!

137

ಕಾರವಾರ: ಹೋಳಿ ಹುಣ್ಣಿಮೆಗೆ ಕೇವಲ ಒಂದಿ ದಿನಗಳು ಬಾಕಿ ಉಳಿದಿದೆ. ಹಬ್ಬದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಸುಗ್ಗಿಯ ಸೊಬಗು ವಿಜ್ರಂಭಣೆಯಿಂದ ನಡೆಯುತ್ತಿದೆ. ಎಲ್ಲಿ ನೋಡಿದರೂ ಬಗೆ ಬಗೆಯ ವೇಷಧಾರಿಗಳು, ಕೋಲಾಟ ಗುಮಟೆಪಾಂಗಿನ ಸದ್ದು ಸಡಗರದ ಸಂಭ್ರಮ ಕಾಣುತ್ತಿದ್ದು ಈಶ್ವರ,ಪಾರ್ವತಿ,ಜಾಂಬುವಂತ,ಹನುಮಂತ ದೇವರು ಸೇರಿದಂತೆ ಅನೇಕ ವಿಶಿಷ್ಟ ವೇಶಭೂಷಣ ತೊಟ್ಟು ಮನೆ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

ಹೋಳಿ ಹುಣ್ಣಿಮೆ ಹತ್ತಿರ ಬರುತ್ತಿದೆಯೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಗ್ಗಿಯ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಜಿಲ್ಲೆಯಲ್ಲಿನ ಹಾಲಕ್ಕಿ, ಕೋಮಾರಪಂಥ, ಕರೆ ಒಕ್ಕಲಿಗ, ನಾಮಧಾರಿ, ಅಂಬಿಗ, ಆಗೇರ ಸೇರಿದಂತೆ ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆ ಸುಗ್ಗಿ ಕುಣಿತವನ್ನ ಹೋಳಿ ಹುಣ್ಣಿಮೆ ಹಬ್ಬದ ಹಿನ್ನಲೆ ನಡೆಸಿತ್ತಾರೆ. ಹಬ್ಬಕ್ಕೂ ಏಳೆಂಟು ದಿನಗಳ ಮುನ್ನ ಸುಗ್ಗಿ ಕುಣಿತ ಪ್ರಾರಂಭಿಸಿ ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತವನ್ನ ಪ್ರದರ್ಶಿಸುತ್ತಾರೆ. ಈ ಬಾರಿ ಸಹ ಕಾರವಾರ ತಾಲೂಕಿನ ತೊಡುರು ಗ್ರಾಮದ ಹಾಲಕ್ಕಿ ಸಮುದಾಯದವರ ಸುಗ್ಗಿ ಕುಣಿತಕ್ಕೆ ಮಾ.3ರಿಂದ ಚಾಲನೆ ದೊರೆತಿದೆ.

ರೋಗಗಳನ್ನು ತಡೆಯುತ್ತದೆ:- ತಾಲೂಕಿನ ತೊಡುರು ಗ್ರಾಮದ ಕರಿದೇವರು ಹಾಗೂ ಕರಿನಾಥನಿಗೆ ನವಮಿಯಂದು ಪೂಜೆ ಮಾಡಿ ಹೊರಟಿರುವ ಸುಗ್ಗಿ ಕುಣಿತದ ತಂಡದವರು, ಮನೆ ಮನೆಗೆ ತೆರಳಿ ತಮ್ಮ ಕಲೆಯನ್ನ ಪ್ರದರ್ಶಿಸುತ್ತಿದ್ದಾರೆ. ಹಾಲಕ್ಕಿ ಸಮಾಜದವರು ಹೋಳಿ ಹುಣ್ಣಿಮೆಗೂ ಏಳು ದಿನಗಳ ಮುಂಚೆ ಸುಗ್ಗಿ ಕುಣಿತವನ್ನ ಪ್ರಾರಂಭಿಸುವುದು ಇದು ಹಿಂದಿನಿಂದಲೂ ಬಂದ ಸಂಪ್ರದಾಯ. ತಮ್ಮ ಜನಾಂಗದವರು ನೆಲೆಸಿರುವ ಮನೆ ಮುಂದೆ ತೆರಳಿ ಸುಗ್ಗಿ ಕುಣಿತ ಮಾಡಿದರೆ ಎಲ್ಲಾ ಸಮಸ್ಯೆ ಬಗೆಹರಿಯುವ, ಯಾವ ರೋಗಗಳು ಮನೆಯವರಿಗೆ ಬರದೆ ತಡೆಯುತ್ತದೆ ಎನ್ನುವುದು ಹಾಲಕ್ಕಿಗರ ನಂಬಿಕೆ. ಈ ಹಿನ್ನಲೆಯಲ್ಲಿ ಕಳೆದ ಹಲವಾರು ವರ್ಷದಿಂದ ಸುಗ್ಗಿ ಕುಣಿತವನ್ನ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಮಾಡುತ್ತಾ ಬರಲಾಗುತ್ತಿದೆ.

ಕುಣಿತ ಮುಗಿಸುವರೆಗೆ ವಾಪಸ್ ಇಲ್ಲ:- ಈ ಸುಗ್ಗಿ ಕುಣಿತಕ್ಕೆ ತನ್ನದೇ ಆದ ವಿಶೇಷವಿದೆ. ಇಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ ಪೇಟವನ್ನ ಕಟ್ಟಿ, ಪಗಡೆ ವೇಷ ಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಮನಸೆಳೆಯುತ್ತದೆ. ಇದರೊಂದಿಗೆ ಗಮಟೆ, ಜಾಗಟೆಯ ಸದ್ದು, ಶಹನಾಯ್ ಮೊದಲಾದ ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರಗು ನೀಡುತ್ತದೆ. ಒಮ್ಮೆ ವೇಷ ತೊಟ್ಟು ಹಣೆಗೆ ಗಂಧವನ್ನ ಇಟ್ಟುಕೊಂಡು ಹೊರಟರೆ ಸುಗ್ಗಿ ಕುಣಿತ ಮುಗಿಸುವ ದಿನದವರೆಗೂ ವಾಪಾಸ್ ಮನೆಗೆ ಬರುವ ಹಾಗಿಲ್ಲ.

ಜೊತೆಗೆ ಸಮಾಜದ ಮನೆಯವರ ಅಂಗಳದಲ್ಲಿ ಸುಗ್ಗಿ ಕುಣಿತ ಮಾಡಿದಾಗ ಅವರು ನೀಡುವ ಹಣ, ಊಟ ತಿಂಡಿ ಸ್ವೀಕರಿಸುವ ಪ್ರತೀತಿ ಇದೆ. ಸುಗ್ಗಿ ಕುಣಿತ ಪ್ರಾರಂಭಿಸಿರುವ ಹಾಲಕ್ಕಿ ಸಮಾಜದವರು ಈ ಬಾರಿ ತೊಡುರು ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ತೆರಳಿ ಮನೆಯಂಗಳದಲ್ಲಿ ನೃತ್ಯ ಮಾಡುತ್ತಾರೆ. ಇವರ ಜೊತೆ ಯುವಕರು ಮಕ್ಕಳು ವಯೋವೃದ್ದರು ಸೇರಿದಂತೆ ಹಲವರು ಸುಗ್ಗಿ ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ. ಸುಗ್ಗಿಯನ್ನ ಕಟ್ಟಿಕೊಂಡಿರುವ ಈ ಹಾಲಕ್ಕಿ ಸಮಾಜದವರು ಹೋಳಿ ಹುಣ್ಣಿಮೆಯ ಬಳಿಕ ಸುಗ್ಗಿ ಮೇಳದಲ್ಲಿ ಬಳಸಿದ ತುರಾಯಿ, ಉಡುಗೆ ತೊಡುಗೆಗಳನ್ನ ಸಮುದ್ರದಲ್ಲಿ ವಿಸರ್ಜನೆ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಮನೆಗಳಿಗೆ ತೆರಳುತ್ತಾರೆ.




Leave a Reply

Your email address will not be published. Required fields are marked *