BREAKING NEWS
Search

ಉತ್ತರ ಕನ್ನಡಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಪರೋಪದ ಕಳಿಂಗ ಕಪ್ಪೆ ಪತ್ತೆ!

907

ಕಾರವಾರ: ಭಾರತದ ಪೂರ್ವ ಘಟ್ಟದಲ್ಲಿ ಮಾತ್ರ ಕಾಣಸಿಗುತ್ತದೆಂದು ನಂಬಲಾಗಿದ್ದ ಕಳಿಂಗ ಕಪ್ಪೆ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಪತ್ತೆಯಾಗಿದೆ. ಜೀವವೈವಿಧ್ಯ ಸಂಶೋಧಕ, ಶಿರಸಿ ತಾಲೂಕಿನ ವರ್ಗಾಸರದ ಅಮಿತ ಹೆಗಡೆ ಹಾಗೂ ತಂಡ ಈ ಪತ್ತೆ ಕಾರ್ಯ ನಡೆಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ’ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವ ಸಂವಹನ ಪ್ರಯೋಗಾಲಯದ ಪ್ರಾಣಿಶಾಸ್ತ್ರ ವಿಭಾಗ’ದಲ್ಲಿ ಪಿ.ಎಚ್‍ಡಿ ಅಧ್ಯಯನ ನಡೆಸುತ್ತಿರುವ ಇವರು ಪ್ರೊ.ಗಿರೀಶ ಕಾಡದೇವರು ಅವರ ಮಾರ್ಗದರ್ಶನದಲ್ಲಿ ಹಾಗೂ ಪುಣೆಯ ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ (ZSI) ವಿಜ್ಞಾನಿ ಕೆ.ಪಿ.ದಿನೇಶ್ ಅವರ ಸಹಯೋಗದಲ್ಲಿ ಈ ಕಪ್ಪೆ ಪತ್ತೆ ಹಚ್ಚಿಲಾಗಿದೆ.

ಶಿರಸಿಯ ಭಾಗದಲ್ಲಿ ಈ ವಿಶಿಷ್ಟ ತಳಿಯು ಪತ್ತೆಯಾಗಿದ್ದು, ’ಜೀವವೈವಿಧ್ಯ-ಸಮೃದ್ಧ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ, ಈ ಸಂಶೋಧನೆಯು ಕೇವಲ ಒಂದು ಶ್ರೇಣಿಯ ವಿಸ್ತರಣೆಯಲ್ಲ. ಆದರೆ ಇದು ರೂಪವಿಜ್ಞಾನದಲ್ಲಿ ಸಂಪೂರ್ಣವಾಗಿ ಭಿನ್ನವಾಗಿ ಕಾಣುವಂತಹ ಶೋಧ ಕಾರ್ಯವಾಗಿದೆ. ಈ ಕಪ್ಪೆಯನ್ನು ಪ್ರುಧ್ವಿ ನೇತೃತ್ವದ ಸಂಶೋಧಕರ ತಂಡದಿಂದ 2018ರಲ್ಲಿ ಪೂರ್ವ ಘಟ್ಟದ ಉತ್ತರ ಭಾಗವಾದ ಓರಿಸ್ಸಾ ಹಾಗೂ ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಲಾಗಿತ್ತು. ಇದು ಪೂರ್ವ ಘಟ್ಟದಲ್ಲಿ ಮಾತ್ರ ಕಂಡುಬರವ ಪ್ರಭೇದ ಎಂಬ ನಂಬಿಕೆ ಈವರೆಗೆ ಇತ್ತು. ಅಚ್ಚರಿ ಎಂಬಂತೆ ಈ ಕಳಿಂಗ ಜಾತಿಯ ಕಪ್ಪೆ ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿರುವುದು ನಿಜಕ್ಕೂ ವಿಸ್ಮಯ ಮೂಡಿಸಿದೆ ಎಂದು ಸಂಶೋಧನೆ ನಡೆಸಿದ ಅಮಿತ ಹೆಗಡೆ ಹೇಳುತ್ತಾರೆ.

ಪಶ್ಚಿಮ ಘಟ್ಟದಲ್ಲಿ ಕಂಡುಬಂದ ಕಳಿಂಗ ಕಪ್ಪೆ ಕೇವಲ ಶ್ರೇಣಿ ವಿಸ್ತರಣೆಯ ಸಂಶೋಧನೆಯಲ್ಲ, ಬದಲಾಗಿ ತನ್ನ ದೇಹ ವಿನ್ಯಾಸದಲ್ಲಿ ಸಂಪೂರ್ಣವಾಗಿ ಭಿನ್ನವಾಗಿ ಕಂಡುಬರುವ ವ್ಯವಂಶಿಕವಾಗಿ ಪೂರ್ವ ಘಟ್ಟದ ಕಳಿಂಗ ಜಾತಿಯ ಕಪ್ಪೆಯಾಗಿದೆ. ಈ ದೊಡ್ಡ ಗಾತ್ರದ ಕ್ರಿಕೆಟ್ ಕಪ್ಪೆ ಹೆಚ್ಚಿನ ಫಿನೋಟೈಪಿಕ್ ಪ್ಲಾಸ್ಟಿಟಿಯನ್ನು (Morphological Phenotypic Plasticity) ತೋರಿಸುತ್ತದೆ.

ಅಂದರೆ ವ್ಯವಂಶಿಕವಾಗಿ ಒಂದೇ ಜಾತಿಯ ಕಪ್ಪೆಗಳು ನೋಡಲು ಬೇರೆ ಬೇರೆ ಪ್ರಕಾರವಾಗಿ ಕಂಡುಬರುತ್ತವೆ. ಈ ಸಂಶೋಧನೆಯಲ್ಲಿ ಪೂರ್ವ ಹಾಗೂ ಪಶ್ಚಿಮ ಘಟ್ಟಗಳ್ಳಲ್ಲಿ ಕಂಡು ಬರುವ ಕಳಿಂಗ ಕಪ್ಪೆಗಳು ಅನುವಂಶಿಕವಾಗಿ ಒಂದೇ ಆಗಿದ್ದು ನೋಡಲು ರೂಪವಿಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳ್ಳನ್ನು ತೋರಿಸುತ್ತಿವೆ.
Morphological Phenotypic Plasticity (MPP) ಎಂದರೆ ನೈಸರ್ಗಿಕ ಪರಿಸರದ ವ್ಯತ್ಯಾಸಗಳು ಅಥವಾ ಪ್ರಚೋದಕಗಳಿಗೆ ಪ್ರತಿಕ್ರಿಯೆಯಾಗಿ ತೀವೃವಾದ ರೂಪವಿಜ್ಞಾನದ ದೇಹ ವ್ಯತ್ಯಾಸಗಳನ್ನು ತೋರಿಸುವ ಜೀವಿ ಸಾಮಥ್ರ್ಯ. ಸಂಶೋಧಕರಾದ ಅಮಿತ್ ರವರು ಈವರೆಗೆ ನಡೆಸಿರುವ ಅಧ್ಯಯನದ ಅನುಭವದಲ್ಲಿ ಹೇಳುವುದಾದರೆ ’ಪಶ್ಚಿಮ ಘಟ್ಟದಲ್ಲಿ ನಾನು ಹಲವಾರು ಬಾರಿ ಈ ಕಪ್ಪೆಯನ್ನು ಕಂಡಿದ್ದೇನೆ. ಇದು ಪಶ್ಚಿಮ ಘಟ್ಟದಿಂದ ತಿಳಿದಿರುವ ಫೆಜೆವರಾಯ/ ಮಿನರ್ವರಿಯಾ ಪ್ರಭೇದಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

21 ನೇ ಶತಮಾನದ ಉಂಟಾಗುತ್ತಿರುವ ಹವಾಮಾನ ವೈಪರಿತ್ಯದಲ್ಲಿ ಅನೇಕ ಜೀವವೈವಿಧ್ಯಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಆದಾಗ್ಯೂ ಪ್ರಸ್ತುತ ನಮ್ಮ ದೇಶದಲ್ಲಿ ಹೊಸ ಪ್ರಭೇದಗಳು ಇತ್ತೀಚೆಗಷ್ಟೇ ಬೆಳಕಿಗೆ ಬರುತ್ತಿವೆ. ಈ ಹೊಸ ಅನ್ವೇಷಣೆ ಸಕಾರಾತ್ಮಕವಾಗಿದೆ. ಆದರೆ ಹೊಸ ಜಾತಿಗಳು, ಪ್ರಭೇದಗಳು ಹೇಗೆ ವರ್ತಿಸುತ್ತವೆ, ಅವುಗಳ ಸ್ವಭಾವಗಳೇನು ಅಥವಾ ವಿಭಿನ್ನ ಜೈವಿಕ ಭೌಗೋಳಿಕ ಶ್ರೇಣಿಗಳಿಗೆ ಅವು ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ಬಗ್ಗೆ ನಮಗೆ ಇನ್ನೂ ಹೆಚ್ಚು ತಿಳಿದಿಲ್ಲ. ಇವುಗಳ ಬಗ್ಗೆ ಕಡಿಮೆ ತಿಳಿದಷ್ಟೂ ಅವುಗಳನ್ನು ಸಂರಕ್ಷಿಸುವುದು ನಮಗೆ ಕಷ್ಟ.

ಕ್ರಿಕೆಟ್ ಕಪ್ಪೆ ಕುಲದೊಳಗಿನ ಜೀವಿವರ್ಗೀಕರಣದ ಅಸ್ಪಷ್ಟತೆಯ ಬಗ್ಗೆ ಹಾಗೂ ಸಂಕೀರ್ಣತೆಯ ಬಗ್ಗೆ ನಾವು ಪ್ರಕಟಿಸಿದ ಸಂಶೋಧನಾ ಪ್ರಬಂಧ ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ,

ಇಲ್ಲಿಯವರೆಗೆ ವಿವರಿಸಿದ ಹೆಚ್ಚಿನ ಪ್ರಭೇದಗಳು ಅವುಗಳನ್ನು ಪತ್ತೆ ಮಾಡಿದ ಪ್ರದೇಶದಿಂದ ಮಾತ್ರ ತಿಳಿದು ಬಂದಿದೆ ಮತ್ತು ಹಳೆಯ ಪ್ರಕಾರದ ಹೆಚ್ಚಿನ ಮಾದರಿಗಳು ಕಳೆದುಹೋಗಿವೆ. ಈ ಸಮಸ್ಯೆಯನ್ನು ಅಥವಾ ಅನಿಶ್ಚಿತತೆಯನ್ನು ಪರಿಹರಿಸಲು ಅಥವಾ ಇವುಗಳ ಬಗ್ಗೆ ಹೆಚ್ಚು ಗಮನಹರಿಸುವ ತುರ್ತು ಅವಶ್ಯಕತೆಯಿದೆ. ಈಶಾನ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯಿಂದ ಸಮೃದ್ಧವಾಗಿವೆ. ಈ ಪ್ರದೇಶಗಳನ್ನು ಜೀವವೈವಿಧ್ಯತೆಯ ತಾಣಗಳೆಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಪೂರ್ವ ಘಟ್ಟಗಳು ಜೀವವೈವಿಧ್ಯತೆಯ ವಿನಿಮಯಕ್ಕಾಗಿ ಈ ಎರಡರ ನಡುವಿನ ಸಂಪರ್ಕ ಸೇತುವೆಯೆ ಎಂಬ ಪ್ರಶ್ನೆಯನ್ನು ಈ ಸಂಶೋಧನಾ ಪ್ರಬಂಧ ಹುಟ್ಟುಹಾಕುತ್ತದೆ.

ಮೂವರು ಸಂಶೋಧಕರು ಸೇರಿ ಕೈಗೊಂಡಿರುವ ಈ ಅಧ್ಯಯನದ ಜೊತೆಗೆ ಅವರ ಅಭಿಪ್ರಾಯ ಏನೆಂದರೆ ಹಳೆಯ ತಲೆಮಾರು ಹಾಗೂ ಹೊಸ ತಲೆಮಾರಿನ ಸಂಶೋಧಕರು, ವಿಜ್ಞಾನಿಗಳು ಕಪ್ಪೆಗಳ ಮೇಲೆ ನಡೆಸಿರುವ ಹಲವಾರು ಸಂಶೋಧನೆಗಳಲ್ಲಿ ಕೈಜೋಡಿಸಿದ್ದರೂ, ಕಪ್ಪೆಗಳನ್ನು ಅರಿಯುವ ಜೊತೆಗೆ ಅವುಗಳ ಸಂರಕ್ಷಣೆಯಲ್ಲಿ ಇನ್ನೂ ನಮ್ಮದು ಮೊದಲ ಹೆಜ್ಜೆ. ಈ ಸಂಶೋಧನೆಯು ಅಂತರರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ’ಝೂಟ್ಯಾಕ್ಸಾ‘ ಎಂಬ ಜರ್ನಲ್‍ನಲ್ಲಿ ಪುರಾವೆಯೊಂದಿಗೆ ಪ್ರಕಟಗೊಂಡಿದೆ ಎಂದು ಸಂಶೋಧಕ ಅಮಿತ ಹೆಗಡೆ ರವರು ವಿವರಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ