ಸ್ವಚ್ಛತೆಯಲ್ಲಿ ಮೂನ್ನೂರು ವಾರ ಪೂರೈಸಿ ಮಾದರಿಯಾಯ್ತು ಪಹರೆ

222

ಕಾರವಾರ :- ಸತತವಾಗಿ ಸ್ವಚ್ಛತಾ ಅಭಿಯಾನ ನಡೆಸಿಕೊಂಡು ಬಂದಿರುವ ಪಹರೆ ಅಭಿಯಾನ ಇಂದು ಮುನ್ನೂರನೇ ವಾರಕ್ಕೆ ಕಾಲಿಡುವ ಮೂಲಕ ದಣಿವರಿಯದೇ ತನ್ನ ಸಾಮಾಜಿಕ ಸೇವೆಯನ್ನು ಮುಂದುವರೆಸಿದೆ.

ಇಂದು ನಸುಕಿನಲ್ಲಿ ಸೇಂಟ್ ಜೋಸೆಫ್ ಶಾಲೆಯ ಮುಂದಿನಿಂದ ಸ್ವಚ್ಛತೆ ಆರಂಭಿಸಿ ನಂತರ ಕಾಜುಭಾಗ ಬಳಿ ಕಾರ್ಯಕ್ರಮ ಮುಗಿಸಲಾಯಿತು.

ಆರಂಭದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿ.ಪಂ. ಸದಸ್ಯೆ ಚೈತ್ರಾ ಕೊಠಾರಕರ , ಆಕಾಶವಾಣಿ ಅಧಿಕಾರಿ ಪ್ಲೋರಿನ್ ರೋಚ್, ಎಲಿಷಾ ಎಲಕಪಾಟಿ, ಮನೋಜ ಭಟ್ ಮತ್ತು ಸದಾನಂದ ಮಾಂಜ್ರೇಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಮಾತನಾಡಿದ ಚೈತ್ರಾ ಕೊಠಾರಕರ ಪಹರೆ ನಮ್ಮ ರಾಜ್ಯದ ಹೆಮ್ಮೆಯ ಮತ್ತು ಮಾದರಿ ಸಂಸ್ಥೆ. ಇದು ಈ ನಾಡಿನ ಅದ್ಭುತ. ನಾನು ಪಹರೆಯ ಸೇವೆಗೆ ಮಾರು ಹೋಗಿದ್ದೇನೆ ಎಂದರು. ಆಕಾಶವಾಣಿ ಅಧಿಕಾರಿ ಪ್ಲೋರಿನ್ ಮಾತನಾಡಿ ಇಂತಹ ಒಳ್ಳೆಯ ಸಂಘಟನೆ ಬೆಳೆಯಲು ಕಾರಣೀಕರ್ತರೊಬ್ಬರು ಇರಬೇಕು. ಪಹರೆಯ ಸಾಧನೆ ಮಾದರಿ ಎಂದು ನುಡಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡು ಮಾಸ್ಕಗಳನ್ನು ಧರಿಸಿ ಸ್ವಚ್ಛತೆ ನಡೆಸಲಾಯಿತು.

ಕರ್ನಾಟಕದಲ್ಲಿ ಸ್ವಚ್ಛತೆಯಲ್ಲಿ ದಾಖಲೆ ಬರೆದ ಪಹರೆ

ಪಹರೆ ಸತತವಾಗಿ 300 ವಾರಗಳ ವರೆಗೆ ಸ್ವಚ್ಛತೆಯನ್ನು ನಡೆಸಿ ಕರ್ನಾಟಕ ರಾಜ್ಯದಲ್ಲಿಯೇ ಹೊಸ ದಾಖಲೆ ಬರೆದಿದೆ. ಜನವರಿ 2015 ರಿಂದ ಶುರುವಾದ ಪಹರೆಯ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಲೇ ಸಾಗಿದೆ. ಮಳೆ , ಬಿಸಿಲು ಎನ್ನದೇ ಇಷ್ಟು ಸುಧೀರ್ಘವಾಗಿ ನಡೆದು ಕೊಂಡು ಬಂದ ಸ್ವಚ್ಛತೆಯ ಹಿಂದೆ ಸಂಘಟಕರ ದೊಡ್ಡದಾದ ಸೇವಾ ಮನೋಭಾವವಿದೆ. ಕೊರೋನಾ ಸಂಧರ್ಭದಲ್ಲಿ ಸಹ ಸರ್ಕಾರದ ನಿಯಮದಂತೆ ಬೀದಿಗಿಳಿದು ಸ್ವಚ್ಛತೆ ಮಾಡಲಾಗದ ಪಹರೆಯು ತನ್ನ ಕಾರ್ಯಕರ್ತರಿಗೆ ತನ್ನ ಮನೆಯ ಸುತ್ತ- ಮುತ್ತ ಪ್ರತಿಯೊಬ್ಬರು ಸ್ವಚ್ಛತೆಯಲ್ಲಿ ತೊಡಗಬೇಕು ಎಂಬ ಕರೆಯನ್ನು ಸಹ ನೀಡಿತು. ಈಗ ಮತ್ತೆ ಕಳೆದ ಅನೇಕ ದಿನಗಳಿಂದ ಸಾಮಾಜಿಕ ಅಂತರ ಕಾದುಕೊಂಡು ಮಾಸ್ಕ ಧರಿಸಿ ಸ್ವಚ್ಛತೆಯಲ್ಲಿ ಅತ್ಯುತ್ಸಾಹದಿಂದ ತೊಡಗಿಸಿ ಕೊಂಡಿದ್ದಾರೆ.

ಮೈಸೂರಿನಲ್ಲಿಯೂ ಒಂದು ಸಂಸ್ಥೆ ಸುಮಾರು ಐದು ವರ್ಷಗಳ ವರೆಗೆ ಸ್ವಚ್ಛತೆ ನಡೆಸಿ ಕಳೆದ ಮೂರು ತಿಂಗಳ ಹಿಂದೆ ಐದು ವರ್ಷವಾದ ತರುವಾಯ ತನ್ನ ಕಾರ್ಯವನ್ನು ಮುಗಿಸಿರುತ್ತದೆ. ಆದರೆ ಜಿಲ್ಲೆಯ ಹೆಮ್ಮೆಯ ಪಹರೆ ವೇದಿಕೆ ಮಾತ್ರ ಐದು ವರ್ಷಗಳು ದಾಟಿ ಐದುವರೆ ವರ್ಷಗಳ ವರೆಗೆ ತನ್ನ ಸ್ವಚ್ಛತಾ ಕಾರ್ಯ ನಡೆಸುತ್ತಾ ರಾಜ್ಯಲ್ಲಿಯೇ ಸುಧೀರ್ಘವಾಗಿ ಸ್ವಚ್ಛತೆ ನಡೆಸಿದ ಸಂಸ್ಥೆ ಎಂದು ಹೆಮ್ಮೆಗೆ ಪಾತ್ರವಾಗಿದೆ.

ಸ್ವಚ್ಛತೆಯಲ್ಲಿ ತೊಡಗಿಸಿಕೊಂಡ ಕೆಲ ಸಂಸ್ಥೆಗಳು ಒಂದಿಷ್ಟು ದಿನ ನಡೆಸಿ ಅರ್ಧಕ್ಕೇ ನಿಲ್ಲಿಸಿದ ಉದಾಹರಣೆಗಳು ಇವೆ. ಇನ್ನು ಕೆಲವು ಸಂಸ್ಥೆಗಳು ಅಲ್ಲೊಂದು – ಇಲ್ಲೊಂದು ದಿನ ಸ್ವಚ್ಛತೆ ನಡೆಸಿವೆ. ಆದರೆ ಪಹರೆ ಮಾತ್ರ ಅವಿಚ್ಚಿನ್ನವಾಗಿ ತನ್ನ ಸೇವೆ ಮುಂದುವರೆಸಿಕೊಂಡು ಬಂದಿರುವುದು ನಾಡಿನ ಜನರ ಶ್ಲಾಘನೆಗೆ ಒಳಗಾಗಿದೆ.
Leave a Reply

Your email address will not be published. Required fields are marked *