ತಂಡ್ರಕುಳಿಯಲ್ಲಿ  ಬಾಂಬ್ ಸಿಡಿತ! ಮನೆಗಳಿಗೆ ಬಿದ್ದವು ಕಲ್ಲುಬಂಡೆಗಳು!ಜನರಿಂದ ರಸ್ತೆ ತಡೆದು ಪ್ರತಿಭಟನೆ

1242

ಕಾರವಾರ:- ದಿವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಬಂಡೆಯನ್ನು ಒಡೆಯಲು ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿರುವುದನ್ನು ವಿರೋಧಿಸಿ ಸ್ಥಳೀಯರು ಕೆಲಗಂಟೆಗಳ ಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಮಧ್ಯಾಹ್ನ ಅವೈಜ್ಞಾನಿಕವಾಗಿ ಸಿಡಿಮದ್ದನ್ನು ಸ್ಫೋಟಿಸಿದ್ದರಿಂದ ಮನೆ, ಶಾಲೆ, ಅಂಗನವಾಡಿಗಳ ಮೇಲೆ ಭಾರೀ ಗಾತ್ರದ ಕಲ್ಲುಗಳ ಸುರಿಮಳೆಯಾಗಿ ಸ್ಥಳೀಯರು ಜೀವಭಯದಿಂದ ಮನೆಬಿಟ್ಟಿದ್ದಾರೆ.

ಸಿಡಿದ ಕಲ್ಲುಗಳು ಸೂರನ್ನು ಒಡೆದುಕೊಂಡು ಒಳಗೆ ಬಿದ್ದರೂ ಅದೃಷ್ಟವಶಾತ್ ಯಾರಿಗೂ ಜೀವಾಪಾಯವಾಗದೇ ಬಚಾವಾಗಿದ್ದಾರೆ.

ರಾಘವೇಂದ್ರ ಅಪ್ಪಯ್ಯ ಅಂಬಿಗ ಎಂಬುವವರ ಮನೆಯ ಕೋಣೆಯೊಳಗೆ ಮಕ್ಕಳು ಮಲಗಿದ್ದ ಹಾಸಿಗೆಯ ಪಕ್ಕವೇ ದೊಡ್ಡ ಕಲ್ಲು ಬಿದ್ದಿದ್ದು, ಸ್ಥಳೀಯರಲ್ಲಿ ಭಯಹುಟ್ಟಿಸಿದೆ.

ಶಾಲೆಯ ಹಂಚುಗಳನ್ನು ಪುಡಿಗಟ್ಟಿ ಒಳಗೆ ಕಲ್ಲುಗಳು ಬಿದ್ದಿದ್ದು, ಒಂದೊಮ್ಮೆ ಕೊಠಡಿಯಲ್ಲಿ ಮಕ್ಕಳು ಇದ್ದಿದ್ದರೆ ಏನಾಗಬಹುದಿತ್ತು ಎಂದು ಜನ ಪ್ರಶ್ನಿಸಿದ್ದಾರೆ.

ಒಟ್ಟಾರೆ ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಗುಡ್ಡ ಕುಸಿದು ಉಂಟಾಗಿದ್ದ ಭಾರೀ ಅನಾಹುತವನ್ನು ಪುನಃ ನೆನಪಿಸುವಂತೆ ಮಾಡಿದೆ.

ತಕ್ಷಣ ಸಂಘಟಿತರಾದ ಗ್ರಾಮಸ್ಥರು ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‌ಬಿಯವರು ಅವೈಜ್ಞಾನಿಕವಾಗಿ ಬಾಂಬ್ ಸಿಡಿಸುವುದನ್ನು ವಿರೋಧಿಸಿ ಪ್ರತಿಭಟಿಸಿದರು.

2 ತಾಸುಗಳಾದರೂ ಐಆರ್‌ಬಿ ಅಥವಾ ಸರ್ಕಾರದ ಯಾವ ಅಧಿಕಾರಿಯೂ ಸ್ಥಳಕ್ಕೆ ಬಾರದೇ ಇರುವುದು ಜನರ ಆಕ್ರೋಶ ಹೆಚ್ಚಲು ಕಾರಣವಾಯಿತು. ನಂತರ ಸ್ಥಳೀಯರು ಹೆದ್ದಾರಿ ತಡೆ ನಡೆಸಿ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಸಿಪಿಐ ಸಂತೋಷ ಶೆಟ್ಟಿ, ತಹಸೀಲ್ದಾರ್ ಪಿ.ಕೆ.ದೇಶಪಾಂಡೆ, ಪಿಎಸೈ ಈಸಿ ಸಂಪತ್ ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದರು. ಬಾಂಬ್ ಸ್ಫೋಟದಿಂದ ನೂರಾರು ಮೀಟರು ದೂರಕ್ಕೆ ಸಿಡಿದ ದೊಡ್ಡ ಕಲ್ಲುಗಳು ಉಂಟುಮಾಡಿದ ಹಾನಿಯನ್ನು ಕಂಡು ದಂಗಾದರು.

ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿದ ತಹಸೀಲ್ದಾರ ದೇಶಪಾಂಡೆಯವರು ಈ ಕೂಡಲೇ ಇಲ್ಲಿನ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು. ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ದಿನಾಂಕ ನಿಗದಿ ಪಡಿಸಿ ಉಪವಿಭಾಗಾಧಿಕಾರಿಗಳ ಸಮಕ್ಷಮ ಸ್ಥಳೀಯರ ಸಭೆ ನಡೆಸಿ ಮುಂದಿನ ತೀರ್ಮಾನಕ್ಕೆ ಬರಲಾಗುವುದು. ಅಲ್ಲಿಯವರೆಗೆ ಕಾಮಗಾರಿ ನಡೆಸದಂತೆ ಗುತ್ತಿಗೆ ಪಡೆದ ಕಂಪನಿಗೆ ಸೂಚಿಸಲಾಗುವುದು ಎಂದರು.
ಚಿತ್ರ ವರದಿ:-ಮಯೂರ್ ಪಟಗಾರ್, ಕುಮಟಾ
Leave a Reply

Your email address will not be published. Required fields are marked *

error: Content is protected !!