BREAKING NEWS
Search

ಜೋಗದ ರಾಜಾ ಫಾಲ್ಸ್ ನಲ್ಲಿ ದರ್ಶನ ನೀಡಿದ ಆಂಜನೇಯ!

2897

ಕಾರವಾರ:- ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಜೋಗ ಜಲಪಾತ ವಿಶ್ವಪ್ರಸಿದ್ಧಿ ಪಡೆದ ಸ್ಥಳ.

ಶರಾವತಿ ನದಿಯ ನೀರು ಕಣಿವೆಗಳ ನಡುವೆ ಹರಿದು ಬಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಭಾಗದಿಂದ ಸುಮಾರು 830 ಅಡಿಗಳ ಎತ್ತರದಿಂದ ಧುಮ್ಮಿಕ್ಕುತ್ತಿರುವುದರಿಂದ ಈ ಊರಿಗೆ ಜೋಗಜಲಪಾತ ಅಥವಾ ಜೋಗಫಾಲ್ಸ್ ಎಂದು ಈ ಸ್ಥಳ ಜಗತ್ಪ್ರಸಿದ್ಧಿಗೊಂಡಿದೆ.

ಈ ಜಲಪಾತದ ಸೌಂದರ್ಯವನ್ನು ಸವಿಯಲು 2 ವೀಕ್ಷಣಾ ಸ್ಥಳಗಳು ಇವೆ. ಒಂದು ಜೋಗ ಜಲಪಾತದ ಮುಂಭಾಗವನ್ನು ಜೋಗದಿಂದ ನೋಡುವುದು. ಈ ಭಾಗ ಶಿವಮೊಗ್ಗ ಜಿಲ್ಲೆಯಲ್ಲಿದೆ. ಮತ್ತೊಂದು ಬ್ರಿಟಿಷ್ ಬಂಗ್ಲೆ ಭಾಗವಾಗಿದ್ದು ಇದು ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿದೆ. ಅದು ಜಲಪಾತದ (ರಾಜಾ ಫಾಲ್ಸ್) ನೀರು ಧುಮ್ಮಿಕ್ಕುವ ಸ್ಥಳ. ರಾಜಾ ಫಾಲ್ಸ್ ನ ಬಳಿ ನಿಂತು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಹನುಮಂತನ ಮುಖ ಕಾಣುತ್ತದೆ ಎಂಬ ಪ್ರತೀತಿಯೂ ಇದೆ. ಇದಕ್ಕೆ ಆಧಾರವೆಂಬಂತೆ ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮಿಗಳವರು ಜೋಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ರಾಜಾಫಾಲ್ಸ್ ನ ಬಳಿ ಶ್ರೀ ಆಂಜನೇಯ ಸ್ವಾಮಿಯ ದರ್ಶನವಾದ ಕಾರಣ 6 ಗಂಟೆಗಳ ಕಾಲ ಅಲ್ಲಿಯೇ ನಿರಂತರ ಧ್ಯಾನಕ್ಕೆ ಕುಳಿತಿದ್ದರಂತೆ. ಇದು ಪ್ರಕೃತಿಯ ವೈಚಿತ್ರ್ಯವೋ ಏನೋ ತಿಳಿದಿಲ್ಲ.ಆದರೆ ಈ ಸ್ಥಳದಲ್ಲಿ ಆಂಜನೇಯನ ಆಕಾರ ಕಂಡವರು ಹಲವರಿದ್ದು ಇದೊಂದು ಪ್ರಕೃತಿ ವಿಸ್ಮಯ ಎನ್ನಬಹುದಾಗಿದೆ.

ಈ ಸೋಜಿಗಗಕ್ಕೆ ಜಲಪಾತದ ಪೌರಾಣಿಕ ಐತಿಹ್ಯವನ್ನು ಶೋಧಿಸಿದಾಗ, ಈ ಜಲಪಾತದ ಸೃಷ್ಟಿಯು ತ್ರೇತಾ ಯುಗದಲ್ಲಿ ಶ್ರೀರಾಮನು ತನ್ನ ವನವಾಸಕ್ಕೆಂದು ಕಾನನದಲ್ಲಿ ವಾಸವಿರುವಾಗ ಈ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೀತಾ ಮಾತೆಗೆ ಬಾಯಾರಿಕೆಯಾಗಿತ್ತೆಂದು, ನೀರಿಗಾಗಿ ರಾಮನು ತನ್ನ ಬತ್ತಳಿಕೆಯಲ್ಲಿದ್ದ ಶರ/ಬಾಣವನ್ನು ಹಿಡಿದು ವರುಣ ಹಾಗೂ ಭೂಮಾತೆಯನ್ನು ಪ್ರಾರ್ಥಿಸಿಕೊಂಡು ಬಿಲ್ಲಿನಿಂದ ಬಾಣವನ್ನು ಬಿಟ್ಟಾಗ ಸದರಿ ಬಾಣ/ಶರವು ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥವೆಂಬಲ್ಲಿ ಭೂಮಿಗೆ ನಾಟಿ ಭೂಮಿಯಿಂದ ಜಲವು ಚಿಮ್ಮಿ ಬಂದಿತ್ತೆಂದು, ಆ ಜೀವಜಲವನ್ನು ತಂದು ಸೀತಾದೇವಿಯ ಬಾಯಾರಿಕೆಯನ್ನು ತೀರಿಸಿದನೆಂಬ ಪ್ರತೀತಿ ಇದೆ.

ಆದ್ದರಿಂದಲೇ ರಾಮನ ಪರಮಭಕ್ತ ಹನುಮನು ಕೂಡ ಇಲ್ಲಿ ನೆಲೆಸಿರುವನು ಎಂದು ಹೇಳಲಾಗುತ್ತದೆ.

ಈ ನದಿಯು ರಾಮನ ಶರದಿಂದ ಹುಟ್ಟಿದ್ದರಿಂದ ಶರಾವತಿಯೆಂದು ಪುರಾಣಗಳಲ್ಲಿ ಪ್ರಸ್ತಾಪವಾಗಿದೆ. ಈ ಶರಾವತಿ ನದಿಯು ಶಿವಮೊಗ್ಗ ಜಿಲ್ಲೆಯ ಕಣಿವೆ ಪ್ರದೇಶಗಳಲ್ಲಿ, ಗುಡ್ಡ-ಬೆಟ್ಟಗಳ ನಡುವೆ ಸುಮಾರು 144 ಕಿ.ಮೀ. ದೂರಕ್ಕೆ ಹರಿದು ಬಂದು ಸಾಗರ ತಾಲ್ಲೂಕಿನ ಹಾಗೂ ಸಿದ್ದಾಪುರ ತಾಲೂಕಿನ ಗಡಿ ಭಾಗದಲ್ಲಿ ಜೋಗ ಎಂಬ ಪ್ರದೇಶದಲ್ಲಿ ಸುಮಾರು 830 ಅಡಿಗಳ ಎತ್ತರದಿಂದ 4 ಕವಲುಗಳಾಗಿ ಧುಮ್ಮಿಕ್ಕುತ್ತದೆ. ಇವುಗಳಿಗೆ ರಾಮ, ಲಕ್ಷ್ಮಣ, ಭರತ ಹಾಗೂ ಸೀತೆ ಎಂಬುದಾಗಿ ಹೆಸರಿಸಲಾಗಿತ್ತು.ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಈ 4 ಕವಲುಗಳನ್ನು ರಾಜ, ರೋರರ್, ರಾಕೇಟ್ ಹಾಗೂ ರಾಣಿ ಎಂದು ಮರು ನಾಮಕರಣ ಮಾಡಿದರು.

ಈಗ ರಾಜ ಪಾಲ್ಸ್ ಬಳಿ ಆಂಜನೇಯನ ಆಕೃತಿ ದರ್ಶನವಾಗುತಿದ್ದು ಸಾಗರ ಭಾಗದ ವೀವ್ ಪಾಯಂಟ್ ನಿಂದ ನೋಡಿದಾಗ ಆಂಜನೇಯನ ಆಕೃತಿ ದರ್ಶನವಾಗುತಿದ್ದು ಈಗ ಸಾಮಾಜಿಕ ಜಾಲತಾಣದಲ್ಲೂ ಈ ಪ್ರಕೃತಿ ವಿಸ್ಮಯದ ಆಂಜನೇಯ ವೈರಲ್ ಆಗುತಿದ್ದು ಪ್ರವಾಸಿಗರನ್ನು ಮತ್ತಷ್ಟು ಸೆಳೆಯುತ್ತಿದೆ.




Leave a Reply

Your email address will not be published. Required fields are marked *