ನೀರು ಕುಡಿದು ಉಪ್ಪು ತಿಂದವರ ವ್ಯಥೆ!ದೇಪಪಾಂಡೆಯವರೇ ಇನ್ನಾದರೂ ನಮ್ಮ ಗೋಳು ಕೇಳಿ!

309

ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡುಗಳಿಂದ ಹಿಡಿದು ಅರಬ್ಬಿ ಸಮುದ್ರ ಆವರಿಸಿದ ವಿಶಿಷ್ಟ ಪ್ರಕೃತಿಯನ್ನು ಹೊಂದಿದ ನಾಡು,ಮಳೆಗಾಲ ಬಂತೆಂದರೇ ಈ ನಾಡು ಹಚ್ಚ ಹಸುರಿನಿಂದ ಕಂಗೊಳಿಸುತ್ತಾ ಎಲ್ಲರ ಗಮನ ಸೆಳೆಯುತ್ತೆ.

ಆದರೇ ಇಲ್ಲಿನ ಜನರ ಗೋಳಿನ ಸಮಸ್ಯೆಗಳು ಮಾತ್ರ ಈ ವರೆಗೆ ಎಲ್ಲಿಯೂ ಗಮನಸೆಳೆದಿಲ್ಲ.ಹೌದು ಇನ್ನೇನು ಕರಾವಳಿಗೆ ಮುಂಗಾರು ಅಪ್ಪಳಿಸಿ ಮಳೆರಾಯನ ಆಗಮನವಾಗುತ್ತಿದೆ,ಮಳೆಗಾಲ ಬಂತೆಂದರೆ ಉತ್ತರ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳು ನಡುಗಡ್ಡೆಯಾಗಿ ಮಾರ್ಪಡುತ್ತದೆ.

ಮಳೆಯ ಆರ್ಭಟಕ್ಕೆ ನದಿ ತೊರೆಯಾಗಿ ಎಷ್ಟೂ ಹಳ್ಳಿಗಳು ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಹಲವುಕಡೆ ಸೂಕ್ತ ಸೇತುವೆಯಿಲ್ಲದೇ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಹೋಗುವ ಸ್ಥಿತಿ ಇಂದಿಗೂ ಇದೆ. ಇಂತಹ ಗ್ರಾಮಗಳಬಗ್ಗೆ ಬೆಳಕುಚಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತರುವುದೇ ಈ ಲೇಖನದ ಉದ್ದೇಶ.


ಜೋಯಿಡಾದಲ್ಲಿ ಮರದ ಕೋಲುಗಳೇ ಸೇತುವೆ!

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಸ್ವ ಕ್ಷೇತ್ರವಾದ ಹಳಿಯಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಯಿಡಾ ತಾಲೂಕಿನ ಅಣಶಿ ಗ್ರಾಮದ ಸಾವಂತ ಮಟಕರ್ಣಿ ಪ್ರದೇಶದಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಕ್ಕೆ 1987 ರಲ್ಲಿ ಕಂಪಗಳನ್ನು ನಿರ್ಮಾಣಮಾಡಲಾಗಿತ್ತು.ಆದರೇ ಈ ವರೆಗೂ ಈ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ,ಮಳೆಗಾಲ ಬಂತೆಂದರೇ ಈ ಕಂಬಗಳಿಗೆ ಮರದ ಅಡ್ಡೆಗಳನ್ನು ಕಟ್ಟಿ ಸೇತುವೆಯಂತೆ ನಿರ್ಮಿಸಿ ಗ್ರಾಮಕ್ಕೆ ಸಾಗಬೇಕಿದೆ.


ಇಲ್ಲಿನ ಗ್ರಾಮದವರು ಪ್ರತಿ ವರ್ಷ ಮಳೆಗಾಲದಲ್ಲಿ ತಮ್ಮ ಊರನ್ನು ತೊರೆದು ಮಕ್ಕಳೊಂದಿಗೆ ಅಣಶಿಗೆ ಸ್ಥಳಾಂತಗೊಳ್ಳುತ್ತಾರೆ,ಇನ್ನು ಇದೇ ಗ್ರಾಮದ ನಾರಗಾಳಿಯಲ್ಲೂ ಇದೇ ಸ್ಥಿತಿಯಿದ್ದು ಹಳ್ಳ ದಾಟಬೇಕಾದರೆ ಮರದ ಕಟ್ಟಿಗೆಗಳೇ ಆಶ್ರಯವಾಗಿದೆ.


ಕಾರವಾರದಲ್ಲೂ ಬದಲಾಗಲಿಲ್ಲ ಸಮಸ್ಯೆ!


ಕಾರವಾರ ತಾಲೂಕಿನ ವೈಲವಾಡ ಗ್ರಾಮಪಂಚಾಯ್ತಿಯ ಉಮ್ಮಳೆಜೂಗದ ನಡುಗಡ್ಡೆಯಲ್ಲಿರುವ ಗ್ರಾಮದ ಸುತ್ತಲೂ ಕಾಳಿ ನದಿ ನೀರು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ.ಸರಿಸುಮಾರು 45 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿದ ಈ ದ್ವೀಪದಲ್ಲಿ 150 ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ.ಕಾರವಾರ ಕ್ಕೆ ಬರಬೇಕೆಂದರೇ ಇವರಿಗೆ ಅಂಗೈ ಅಗಲದ ನಾಡ ದೋಣಿಯೇ ಆಶ್ರಯ.ಹೀಗಾಗಿ ಈ ಗ್ರಾಮದ ಯುವಕರಿಗೆ ಹೆಣ್ಣುಕೊಡಲೂ ಯಾರು ಸಹ ಮುಂದೆಬರುತ್ತಿಲ್ಲ.

ಈ ಹಿಂದೆ ಈ ಬಗ್ಗೆ ಗ್ರಾಮದ ಜನರು ತಮ್ಮ ಸಮಸ್ಯೆಯನ್ನು ಅಂದಿನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಗಮನಕ್ಕೆ ತಂದು ಮನವಿ ಸಹ ನೀಡಿದ್ದರು. ಈ ಬಗ್ಗೆ ಶೀಘ್ರದಲ್ಲಿ ಸರ್ಕಾರದ ಗಮನಕ್ಕೆ ತಂದು ಸೇತುವೆ ನಿರ್ಮಾಣದ ತುಪ್ಪ ಹಚ್ಚಲಾಗಿತ್ತು ಇಲ್ಲಿನ ಜನರಿಗೆ.ಆದರೇ ಈವರೆಗೂ ಸೇತುವೆ ನಿರ್ಮಾಣದ ಬಗ್ಗೆ ಪ್ರಸ್ಥಾಪವೇ ನಡೆದಿಲ್ಲದಿರುವುದು ಜಿಲ್ಲಾಡಳಿತದ ಅಸಡ್ಡೆಗೆ ಉದಾಹರಣೆಯಾಗಿದೆ.


ಯಲ್ಲಾಪುರದ ಈ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಜೀವ ಕೈಯಲ್ಲಿ ಹಿಡಿಬೇಕು!


ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಗಾಂವ್ ಗ್ರಾಮದ ನಾಗುಂದ ಹಳ್ಳಕ್ಕೂ ಸೇತುವೆಯಿಲ್ಲದೇ ವಿಧ್ಯಾರ್ಥಿಗಳು ,ಶಾಲಾ ಕಾಲೇಜಿಗೆ ತೆರಳುವವರಿಗೆ ತೀರ್ವ ತೊಂದರೆಯಾಗುತ್ತಿದ್ದು ಜೀವ ಕೈಯಲ್ಲಿ ಹಿಡಿದು ಹೋಗುವ ಸ್ಥಿತಿ ಈಗಲು ಪ್ರಸ್ಥುತವಾಗಿದ್ದು ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಇಲ್ಲಿನ ಜನ ಸುಸ್ತಾಗಿದ್ದಾರೆ.


ಶಿರಸಿಯ ಈ ಊರಿಗೆ ಮಳೆಗಾಲದಲ್ಲಿ ಸಂಪರ್ಕವೇ ಇಲ್ಲ!


ಶಿರಸಿ ತಾಲೂಕಿನ ಮತಿಘಟ್ಟ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆಗಾಲ ಬಂತೆಂದರೇ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಇಲ್ಲಿನ ಊರುಗಳಿಗೆ ಜನರೇ ನಿರ್ಮಿಸಿಕೊಂಡ ಸಂಕಗಳೇ ಸಂಪರ್ಕದ ಮೂಲವಾಗಿದೆ. ಹೀಗಾಗಿ ಮಳೆಗಾಲ ಪ್ರಾರಂಭವಾಯಿತು ಎಂದರೇ ಈ ಗ್ರಾಮವು ಸಂಪೂರ್ಣ ಸಂಪರ್ಕವನ್ನೇ ಕಳೆದುಕೊಳ್ಲುತ್ತವೆ.ಇನ್ನು ಇಲ್ಲಿನ ಗ್ರಾಮದವರು ಮಳೆಗಾಲ ಮುಗಿಯುವ ವರೆಗೂ ಅಡಿಗೆ ಪದಾರ್ಥಗಳನ್ನು ಶೇಕಡಿಸಿಟ್ಟುಕೊಳ್ಳಬೇಕು,ಆರೋಗ್ಯ ಹದಗೆಟ್ಟರೇ ವೈದ್ಯರ ಬಳಿ ಕರೆತರಲು ನಗರಕ್ಕೆ ಸಂಪರ್ಕವೇ ಇಲ್ಲ.

ಇದೇ ತಾಲೂಕಿನ ಕೀಚನಾಳು ಗ್ರಾಮದ ಹಳ್ಳಕ್ಕೂ ಮರದ ಹಲಗೆಯೇ ಕಾಲುಸಂಕ. ಈ ಹಿಂದೆ ಕೀಚನಾಳದಲ್ಲಿ ಕಿರು ಸೇತುವೆ ನಿರ್ಮಾಣಕ್ಕಾಗಿ ಕಳೆದ ಸಾಲಿನಲ್ಲಿ 15 ಲಕ್ಷ ಮಂಜೂರು ಮಾಡಲಾಗಿತ್ತು,ಇನ್ನು ಸೇತುವೆ ನಿರ್ಮಾಣಕ್ಕೆ ಅಲ್ಪ ಮೊತ್ತವಾಗುತ್ತದೆ ಎಂಬ ಹಿನ್ನಲೆಯಲ್ಲಿ 23 ಲಕ್ಷದ ಪರಿಷ್ಕøತ ಕ್ರಿಯಾಯೋಜನೆಯನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಗೆ ಕಳುಹಿಸಲಾಗಿದೆ ಆದರೇ ಈ ವರೆಗೂ ಹಣ ಮಂಜೂರಾಗಬೇಕಿದ್ದು ಕಾಯಕಲ್ಪ ಸಿಗಬೇಕಿದೆ.

ಪ್ರತಿ ಮಳೆಗಾಲ ಈ ಊರುಗಳಿಗೆ ನರಕ ತೋರಿಸುತ್ತದೆ. ಜನರು ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಸುಸ್ತಾಗಿದ್ದಾರೆ.ಹಾಗೆಂದ ಮಾತ್ರಕ್ಕೆ ಸಚಿವ ಆರ್.ವಿ ದೇಶಪಾಂಡೆಯವರಿಗಾಗಲಿ ಜಿಲ್ಲಾಡಳಿತಕ್ಕಾಗಲೀ ಈ ಸಮಸ್ಯೆ ತಿಳಿದಿಲ್ಲ ಎಂದಲ್ಲ ಆದರೇ ಈವರೆಗೂ ಇದನ್ನು ಬಗೆಹರಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲವಷ್ಟೆ. ಇನ್ನೂದರೂ ಈ ಊರುಗಳ ಸಮಸ್ಯೆ ಬಗೆಹರಿಸಿ ಇಲ್ಲಿನ ಜನರಿಗೆ ನಾಗರೀಕರಂತೆ ಬದುಕಲು ಅವಕಾಶ ಮಾಡಿಕೊಡಿ ಎಂದಷ್ಟೇ ಹೇಳಬಹುದು.
Leave a Reply

Your email address will not be published. Required fields are marked *

error: Content is protected !!