ಯಕ್ಷ ಕರ್ಣ ಭಾಗವತ ನೆಬ್ಬೂರು ನಾರಾಯಣ ಹೆಗಡೆ ವಿಧಿವಶ

111

ಶಿರಸಿ: ಯಕ್ಷಗಾನ ಕ್ಷೇತ್ರದ ಖ್ಯಾತ ಮತ್ತು ಹಿರಿಯ ಭಾಗವತ, ತಾಲೂಕಿನ ಹಣಗಾರ ನಿವಾಸಿ ನೆಬ್ಬೂರು ನಾರಾಯಣ ಹೆಗಡೆ (83) ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿರಿದ್ದಾರೆ.

1956-57 ರ ಸಮಯದಲ್ಲಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡ ಅವರು ಕೆರೆಮನೆ ಮೇಳವನ್ನು ಸೇರಿದರು.
ಈ ಮೂಲಕ ಯಕ್ಷಗಾನ ಪಯಣವನ್ನು ಆರಂಭಿಸಿ 2010ರವರೆಗೂ ಅದೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಕಾರ್ಯನಿರ್ವಹಿಸಿದರು.

ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಅವರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದ ಅವರು, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಭಾಗವತರು ಕೆರೆಮನೆ ಮೇಳದಲ್ಲಿ ಇರುವಾಗ ಅವರೊಂದಿಗೆ ಸಂಗೀತಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಭಾವನಾತ್ಮಕ ಆಖ್ಯಾನಗಳಾದ ಕರ್ಣಪರ್ವ, ನಳದಮಯಂತಿ, ಹರಿಶ್ಚಂದ್ರ, ರಾಮನಿರ್ಯಾಣದಂತಹ ಪ್ರಸಂಗಗಳನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡಿದ ಕೀರ್ತಿ ನೆಬ್ಬೂರು ಅವರಿಗೆ ಸಲ್ಲುತ್ತದೆ. ಕಲೆ ಎಂಬುದು ಆರಾಧನೆಯೇ ಹೊರತು ಗಳಿಗೆಯ ಭಾಗವಲ್ಲ ಎಂದು ತಾವು ಇರುವಷ್ಟು ದಿನವೂ ಅನುಸರಿಸಿಕೊಂಡು ಬಂದವರು ಇವರು.

ಭಾಗವತರ ಸೇವೆಯನ್ನು ಗುರುತಿಸಿ ಸಂದ ಪ್ರಶಸ್ತಿ- ಪುರಸ್ಕಾರಗಳು ಅನೇಕ. ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆ ಆಗಿದ್ದ ಅವರು ಅಭಿಮಾನಿಗಳ ಆಗ್ರಹಕ್ಕೆ‌ ಮಣಿದು ಆಟ-ಕೂಟದಲ್ಲಿ ಭಾಗವಹಿಸುತ್ತಿದ್ದರು. ಅವರ ನಿಧನದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಯಕ್ಷ ಪರಂಪರೆಯ ಕೊಂಡಿ ಕಳಚಿದಂತಾಗಿದೆ.




Leave a Reply

Your email address will not be published. Required fields are marked *

error: Content is protected !!