BREAKING NEWS
Search

ಫೋಟೋಗ್ರಾಫಿ ಎಂಬ ಬೆಳಕಿನ ಬರವಣಿಗೆಗೊಂದು ದಿನ..

399

ಫೋಟೋ ಎಂದೊಡನೆ ಎಲ್ಲರಲ್ಲೂ ಅದೇನೋ ಒಂದು ಆಸಕ್ತಿ ಮತ್ತು ಆಕರ್ಷಣೆ. ಈಗ ರಾಶಿಗಟ್ಟಲೆ ಮೆಗಾ ಪಿಕ್ಸೇಲ್ಸ್ ನ ಮೊಬೈಲ್ ಕ್ಯಾಮರಾ ಇದ್ದರೂ ಕುತ್ತಿಗೆಗೆ ನೇತುಹಾಕಿಕೊಂಡ ಕ್ಯಾಮರಾಗಳ ಮೇಲಿನ ಗೌರವ ಮತ್ತು ಅದನ್ನು ಉಪಯೋಗಿಸಿ ಉತ್ತಮವಾಗಿ ಜಾಣ್ಮೆಯಿಂದ ಫೋಟೋ ಸೆರೆಹಿಡಿಯುವ ನಾಜೂಕಿನ ಕಲೆ ತಿಳಿದಿರುವ ಫೋಟೋಗ್ರಾಫರ್ ಗಳಿಗೆ ಈಗಲೂ ಬೇಡಿಕೆ ಏನೂ ಕಡಿಮೆಯಾಗಿಲ್ಲ.

ಡಿಜಿಟಲ್ ಜಗತ್ತಿನಲ್ಲೂ ರೋಲ್ ಕ್ಯಾಮರಾ ಬಳಸುವರರು ಇನ್ನು ಇದ್ದಾರೆ. 4ಕೆ ಕಲರ್ ರೆಲ್ಯೂಷನ್ ಕಾಲದಲ್ಲೂ ಜನ ಬ್ಲ್ಯಾಕ್ ಅಂಡ್ ವೈಟ್ ಫೋಟೋಗೆ ಮಾರುಹೋಗುತ್ತಾರೆ. ಅದೇ ಫೋಟೋಗ್ರಾಫಿ ಎಂಬ ಲೋಕದ ವಿಸ್ಮಯ.

ಫೋಟೋ: ನನ್ನ ಅಜ್ಜ ಶ್ರೀ ಕಾಯ್ಕಿಣಿ ರಾಮಚಂದ್ರ ದತ್ತ ಭಟ್ ರವರು ಬಳಸಿದ ಕೆಲವು ಕ್ಯಾಮರಾಗಳು.

‘ಫೋಟೋಗ್ರಾಫಿ’ ಎಂಬ ಪದವನ್ನು ಸರ್‌ ಜಾನ್‌ ಹರ್ಷೆಲ್ ಮೊದಲಬಾರಿಗೆ ಬಳಸಿದರು. ಇದು ಗ್ರೀಕ್ ಭಾಷೆಯ ಪೋಸ್ ಮತ್ತು ಗ್ರಾಫಿಯಿನ್‌ ಎಂಬ 2 ಪದಗಳಿಂದ ರಚನೆಯಾದ ಪದ. ಪೋಸ್ ಎಂದರೆ ಬೆಳಕು, ಗ್ರಾಫಿಯಿನ್‌ ಎಂದರೆ ಬೆಳಕಿಂದ ಬರೆದಿದ್ದು ಎಂದರ್ಥ.

ಪ್ರಪಂಚಕ್ಕೆ ಕ್ಯಾಮರಾ ಬರುವ ಮೊದಲೇ ದೊಡ್ಡ ಪೆಟ್ಟಿಗೆಯ ಒಂದು ಬದಿಯಲ್ಲಿ ಚಿಕ್ಕ ತೂತು ಮಾಡಿ ಅದರಿಂದ ಆಚೆಬದಿಯ ಚಿತ್ರವನ್ನು ತಲೆಕೆಳಗಾಗಿ ನೋಡಬಹುದಾಗಿದ್ದ ‘ಕ್ಯಾಮರಾ ಅಬ್ಸ್‌ಕ್ಯೂರಾ’ (Camera Obscura, ಪಿನ್‌ಹೋಲ್ ಕ್ಯಾಮೆರಾ ಎಂದೂ ಪರಿಚಿತ)ಎಂಬ ಸಾಧನವನ್ನು ಬಳಸಲಾಗುತ್ತಿತ್ತು. ಈ ಬಿಂಬವನ್ನು ಕೇವಲ ನೋಡಲು ಅಥವಾ ಇದನ್ನು ನೋಡಿ ಕೈಚಿತ್ರ ರಚಿಸಲು ಬಳಸಲಾಗುತ್ತಿತ್ತು.

ನಂತರದ ದಿನಗಳಲ್ಲಿ ಕ್ಯಾಮರಾ ಅಬ್ಸ್‌ಕ್ಯೂರಾ ಜನ ಸಾಮಾನ್ಯರ ಉಪಯೋಗಕ್ಕೆ ತಕ್ಕದಲ್ಲ ಎಂದು ತಿಳಿದು, 1827ರಲ್ಲಿ ಫ್ರಾನ್ಸಿನ ನಿಸೆಫೋರ್ ನಿಯಪ್ಸ್ ಎಂಬ ವ್ಯಕ್ತಿ ಕ್ಯಾಮರಾ ಅಬ್ಸ್‌ಕ್ಯೂರಾದ ಬಿಂಬ ಬೀಳುವ ಸ್ಥಳದಲ್ಲಿ ಒಂದು ರಾಸಾಯನಿಕಯುಕ್ತವಾದ ಲೋಹದ ಫಲಕವನ್ನಿಟ್ಟು ಮೂಡಿರುವ ಬಿಂಬ ಫಲಕದಮೇಲೆ ಅಚ್ಚಾಗುವಂತೆ ಮಾಡಿದರು. ಆದರೆ ಆ ಹೀಲಿಯೋಗ್ರಫಿ ಕ್ರಿಯೆ ಸಂಪೂರ್ಣವಾಗಲು 6 ರಿಂದ 7 ಗಂಟೆ ಬೇಕಿತ್ತು ಅಲ್ಲದೆ ಅದು ಮತ್ತೆ ಬೆಳಕಿಗೆ ತಂದಾಗ ಅಳಿಸಿ ಹೋಗುತಿತ್ತು. ಆ ಕಾರಣಕ್ಕೆ ಛಾಯಾಚಿತ್ರ ತಂತ್ರಜ್ಞಾನವನ್ನು ಸುಧಾರಿಸಲು ಹಲವಾರು ಮಂದಿ ಸತತ ಪ್ರಯತ್ನ ನಡೆಸುತ್ತಲೇ ಇದ್ದರು.

ಆ ಸಂದರ್ಭದಲ್ಲಿ ಫ್ರಾನ್ಸಿನ ಲೂಯಿ ಡಿಗೇರ್ ಎಂಬಾತ ಆವಿಷ್ಕರಿಸಿದ ಡಿಗೇರೋಟೈಪ್ ತಂತ್ರಜ್ಞಾನವು ಛಾಯಾಚಿತ್ರವನ್ನು ಕೇವಲ 20 ರಿಂದ 30 ನಿಮಿಷದ ಒಳಗೆ ಸೆರೆ ಹಿಡಿದು ಫಲಕದ ಮೇಲೆ ಖಾಯಂ ಆಗಿ ಅಚ್ಚಾಗುತ್ತಿತ್ತು. ಈ ತಂತ್ರಜ್ಞಾನವೇ ಮುಂದೆ ಸುಧಾರಿತ ಕ್ಯಾಮರಾಗಳಿಗೆ ನಾಂದಿಹಾಡಿತು.

1839ರ ಆಗಸ್ಟ್‌ 19ರಂದು ಫ್ರೆಂಚ್‌ ಸರಕಾರ ಡಿಗೇರೋಟೈಪ್ ಕ್ಯಾಮರಾ ಆವಿಷ್ಕಾರವನ್ನು ತಾನು ‘ಮನುಕುಲಕ್ಕೆ ನೀಡುತ್ತಿರುವ ಉಚಿತ ಉಡುಗೊರೆ’ ಎಂದು ಅಭಿಮಾನದಿಂದ ಘೋಷಿಸಿತು. ಇದೆ ದಿನವನ್ನು ಇಂದಿಗೂ ನಾವು ವಿಶ್ವ ಛಾಯಾಗ್ರಹಣದ ದಿನ ಎಂದು ಆಚರಿಸಲಾಗುತ್ತಿದೆ. ಈ ಭಾರಿ 2020 ರ ಆಗಸ್ಟ್ 19 ರಂದು 181ನೇ ವಿಶ್ವ ಛಾಯಾಗ್ರಹಣದ ದಿನ.

ಛಾಯಾಗ್ರಹಣ ತಂತ್ರಜ್ಞಾನದ ಆವಿಷ್ಕಾರ 1839ಕ್ಕೆ ನಿಂತಿಲ್ಲ. ಅದೇ ವರ್ಷ ವಿಲಿಯಮ್‌ ಫಾಕ್ಸ್‌ ಟಾಲ್‌ ಬಾಟ್‌ ‘ಕ್ಯಾಲೋಟೈಪ್‌'(ನೆಗೆಟಿವ್) ಕ್ಯಾಮರಾ ಸಂಶೋಧಿಸಿದ. 1841ರಲ್ಲಿ ಈ ಸಂಶೋಧನೆಯನ್ನು ಫ್ರೆಂಚ್‌ ಸರಕಾರ ಅಧಿಕೃತವಾಗಿ ಘೋಷಿಸಿತು. ನಂತರವೂ ನಿರಂತರವಾಗಿ ಹಲವಾರು ಮಂದಿ ಈ ಕ್ಷೇತ್ರದಲ್ಲಿ ಹಲವಾರು ಕೊಡುಗೆಗಳನ್ನು ನೀಡಿದರು. ಅವರ ಶ್ರಮದಿಂದಲೇ ಇಂದು ಫೋಟೋಗ್ರಾಫಿ ಎಂಬ ಕಲೆ ವಿಶ್ವವೆಲ್ಲ ಪಸರಿಸಿದ್ದು.

1841ರ ನಂತರ…..


ಜಾರ್ಜ್‌ ಈಸ್ಟ್‌ಮನ್‌ 1888 ರಲ್ಲಿ ಈಸ್ಟ್‌ಮನ್‌ ಕೊಡಕ್ ಕಂಪನಿಯನ್ನು ಸ್ಥಾಪಿಸಿ, ನೆಗೆಟಿವ್ ರೋಲ್ ಗಳನ್ನು ಬಳಸಿ ಫೋಟೋ ಸೆರೆಹಿಡಿಯುವ ಕ್ಯಾಮರಾವನ್ನು ತಯಾರಿಸಿದರು.
ಎಡ್ವಿನ್ ಎಚ್ ಲ್ಯಾಂಡ್ 1947ರಲ್ಲಿ ಪೊಲಾರೈಡ್ ಇನ್ಸ್ಟಂಟ್ ಕ್ಯಾಮರಾವನ್ನು ಜಗತ್ತಿಗೆ ಪರಿಚಯಿಸಿದರು.
ಈಸ್ಟ್‌ಮನ್ ಕಲರ್ ನೆಗೆಟಿವ್ ಅನ್ನು 1950ರಲ್ಲಿ ಜಗತ್ತಿಗೆ ಪರಿಚಯಿಸಲಾಯಿತು.
ಈಸ್ಟ್‌ಮನ್‌ ಕೊಡಕ್ ಕಂಪನಿಯ ಸ್ಟೀವ್ ಸಾಸ್ಸನ್ ಎಂಬುವವರು 1975ರಲ್ಲಿ ಡಿಜಿಟಲ್ ಕ್ಯಾಮರಾವನ್ನು ಅಭಿವೃದ್ಧಿಪಡಿಸಿದರು ಅದು 0.01ಮೆಗಾಪಿಕ್ಸೆಲ್ ನಲ್ಲಿ ಕಪ್ಪು ಬಿಳಿಪು ಚಿತ್ರ ತೆಗೆಯುತ್ತಿತ್ತು. ಫೋಟೋ ಕ್ಲಿಕ್ ಮಾಡಿದ ಇಪ್ಪತ್ತಮೂರು ನಿಮಿಷದ ಬಳಿಕ ಚಿತ್ರ ಮೂಡುತ್ತಿತ್ತು.
1997 ರಲ್ಲಿ ಜಪಾನಿನ ಕೋಯ್ಸಿರಾ ಕಂಪನಿ ಮೊಟ್ಟ ಮೊದಲ ಕ್ಯಾಮರಾ ಫೋನ್ ಅನ್ನು ಬಿಡುಗಡೆಗೊಳಿಸಿತು.

ಈಗಂತೂ ಹಲವಾರು ರೀತಿಯ ಉತ್ಕೃಷ್ಟ ತಂತ್ರಜ್ಞಾನದ ಕ್ಯಾಮರಾ ಮತ್ತು ಅಸಂಖ್ಯ ರೀತಿಯ ಫೋಟೋಗ್ರಾಫಿ ವಿಧಗಳು ನಮ್ಮ ಮುಂದಿವೆ. ಕ್ಯಾಮರಾ & ಫೋಟೋಗ್ರಾಫಿ ಎಂಬ ನೆರಳು-ಬೆಳಕಿನ ಕಲೆಯ ಇತಿಹಾಸವನ್ನು ಒಮ್ಮೆ ಮೆಲುಕು ಹಾಕಲು ಹಲವಾರು ಜಾಲತಾಣಗಳಲ್ಲಿ ಸಿಕ್ಕ ಮಾಹಿತಿಯನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದೆ ಇಟ್ಟಿದ್ದೇನೆ.

ಫೋಟೋಗ್ರಾಫಿ ಎಂಬುದು ಒಂದು ಬಾಂಧವ್ಯ ಮತ್ತು ಬದುಕು.

181 ನೇ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು.

ಲೇಕನ:- ಅಂಜನ್ ಕಾಯ್ಕಿಣಿ. ಸಾಗರ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ