add

“ರವಿ ಅಸ್ತಂಗತ!’

903

ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ವಾರಪತ್ರಿಕೆಯ ಸ್ಥಾಪಕ ರವಿ ಬೆಳೆಗೆರೆ (62) ನ.12 ರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗುರುವಾರ ತಡರಾತ್ರಿಯಲ್ಲಿ ತಮ್ಮ ಹಾಯ್ ಬೆಂಗಳೂರು ಕಛೇರಿಯಲ್ಲಿ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಪತ್ರಿಕೋದ್ಯಮ ವೃತ್ತಿ ಪ್ರಾರಂಭಿಸಿದ್ದ ಅವರು, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು, ನಂತರ 1995 ರಲ್ಲಿ ಹಾಯ್ ಬೆಂಗಳೂರು ಟಾಬ್ಲಾಯ್ಡ್ ಪತ್ರಿಕೆಯನ್ನು ಪ್ರಾರಂಭಿಸಿದ್ದರು.
ರವಿ ಬೆಳೆಗೆರೆ ಅವರ ಬಾಟಮ್ ಐಟಮ್, ಖಾಸ್ ಬಾತ್ ಅಂಕಗಳು ಅತ್ಯಂತ ಜನಪ್ರಿಯ. ಹಿಮಾಗ್ನಿ, . ಸರ್ಪ ಸಂಬಂಧ, ಭೀಮಾತೀರದ ಹಂತಕರು, ನೀ ಹಿಂಗ ನೋಡಬೇಡ ನನ್ನ,ಡಿ ಕಂಪನಿ, ರಾಜ್ ಲೀಲಾ ವಿನೋದ ನೀನಾ ಪಾಕಿಸ್ತಾನ? ಡಿ ಕಂಪನಿ, ದಂಗೆಯ ದಿನಗಳು ಸೇರಿದಂತೆ ಅನೇಕ ಜನಪ್ರಿಯ ಕೃತಿಗಳನ್ನು ರಚಿಸಿದ್ದರು.

ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದ ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

ನಾನು ನಿಮ್ಮ ಜೊತೆ ಇದ್ದೀನಿ ಕಣೋ. ನೀನು ಚೆನ್ನಾಗಿ ಬೆಳೆಯಬೇಕು ಎಂದು ಹೇಳಿದ್ದರು. ಆದರೆ ಅವರ ಸಾವಿನ ಸುದ್ದಿ ನಮಗೆ ಶಾಕ್ ಆಗಿದೆ ಎಂದು ರವಿಬೆಳಗೆರೆ ಪುತ್ರ ಕರ್ಣ ಕಣ್ಣೀರು ಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರವಿಬೆಳಗೆರೆ ರಾತ್ರಿ ಪದ್ಮನಾಭ ಕಚೇರಿಯಲ್ಲಿ ಸಾವನ್ನಪ್ಪಿದ್ದಾರೆ. ರಾತ್ರಿ ಸುಮಾರು 12.15ರ ವೇಳೆಗೆ ಎದೆ ನೋವು ಕಾಣಿಸಿಕೊಂಡಿತ್ತು. ನಾನು ಹೋಗುವಷ್ಟರಲ್ಲಿ ಆಸ್ಪತ್ರೆಗೆ ಸಾಗಿಸಲೆಂದು ತಯಾರಾಗಿದ್ದರು. ಆದರೆ ಅದಾಗಲೇ ಅವರ ಸಾವು ಕೂಡ ಆಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಅವರು ನಮ್ಮ ಜೊತೆ ಇನ್ನೂ ಬಹಳ ದಿನಗಳ ಕಾಲ ಬದುಕಿರುತ್ತಿದ್ದರು ಅಂತ ಭಾವಿಸಿದ್ವಿ. ಪ್ರಾರ್ಥನಾ ಶಾಲೆ ಮತ್ತಷ್ಟು ಎತ್ತರಕ್ಕೆ ಬೆಳಸಬೇಕು ಅನ್ನೋ ಬಹುದೊಡ್ಡ ಆಸೆ ಅವರಿಗಿತ್ತು. ಅವರಿಗೆ ಡಯಾಬಿಟಿಸ್ ಇತ್ತು, ಕಾಲುಗಳ ನೋವಿತ್ತು. ಕಳೆದ ಮೂರು ದಿನಗಳ ಹಿಂದೆಯಷ್ಟೇ ನಾನು ಅವರ ಜೊತೆ ಮಾತನಾಡಿದ್ದರು. ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ದರು ಎಂದು ತಿಳಿಸಿದರು.

ನೀನು ಚೆನ್ನಾಗಿ ಬೆಳಯಬೇಕು ಅಂತ ಕೂಡ ಹೇಳಿದ್ದರು. ಆದರೆ ಅವರ ದಿಢೀರ್ ಸಾವಿನ ಸುದ್ದಿ ನಮಗೆ ಶಾಕ್ ಆಗಿದೆ. ಬೆಳಗ್ಗೆ 9 ಗಂಟೆಗೆ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ